ಗಡಿ ಪ್ರದೇಶದಲ್ಲಿ ಕನ್ನಡ ಉಳಿಸಿ, ಬೆಳೆಸಬೇಕು

| Published : Nov 02 2025, 02:45 AM IST

ಸಾರಾಂಶ

ಕರ್ನಾಟಕ ಏಕೀಕರಣವು ಒಂದು ಮಹತ್ವದ ಐತಿಹಾಸಿಕ ಘಟ್ಟ. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಗ್ಗೂಡಿ ಭಾಷಾ ಆಧಾರದ ಮೇಲೆ ರಾಜ್ಯ ವಿಂಗಡಣೆಯಾಗಲು ಹೋರಾಡಿದ ಎಲ್ಲ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ಕನ್ನಡ ಭಾಷೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದ್ದು, ನಾವೆಲ್ಲರೂ ನಮ್ಮ ಭಾಷೆಯ ಬಳಕೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಚೇಳೂರುಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ ಎಂದು ತಹಸೀಲ್ದಾರ್ ಬಿ.ಕೆ ಶ್ವೇತಾ ಮನವಿ ಮಾಡಿದರು.ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಕರ್ನಾಟಕ ಏಕೀಕರಣವು ಒಂದು ಮಹತ್ವದ ಐತಿಹಾಸಿಕ ಘಟ್ಟ. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಗ್ಗೂಡಿ ಭಾಷಾ ಆಧಾರದ ಮೇಲೆ ರಾಜ್ಯ ವಿಂಗಡಣೆಯಾಗಲು ಹೋರಾಡಿದ ಎಲ್ಲ ಮಹನೀಯರನ್ನು ನಾವು ಸದಾ ಸ್ಮರಿಸಬೇಕು ಎಂದರು.

ಕನ್ನಡಕ್ಕೆ ಶ್ರೀಮಂತ ಇತಿಹಾಸ

ಪಿಡಿಒ ಗೌಸ್ ಪೀರ್ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದ್ದು, ನಾವೆಲ್ಲರೂ ನಮ್ಮ ಭಾಷೆಯ ಬಳಕೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಜಿ. ವೆಂಕಟರವಣಪ್ಪ ಮಾತನಾಡಿ, ಈ ಭಾಗದ ವಿದ್ಯಾವಂತರು ತಮ್ಮ ಮನೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಸ್ನೇಹಿತರೊಂದಿಗೆ ಮಾತನಾಡುವಾಗ ಕನ್ನಡವನ್ನೇ ಬಳಸಬೇಕು. ಈ ಸಣ್ಣ ಪ್ರಯತ್ನದಿಂದ ಕನ್ನಡ ಗಟ್ಟಿಯಾಗಲು ಸಾಧ್ಯ ಎಂದರು.

ಕಚೇರಿಗೆ ದೀಪಾಲಂಕಾರ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲೂಕು ಕಚೇರಿಯನ್ನು ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಶಿರಸ್ತೇದಾರ್ ಸತೀಶ್, ಆರ್ ಐ ಈಶ್ವರ್, ಅಧ್ಯಕ್ಷ ಕೌಸ್ತರ್, ಉಪಾಧ್ಯಕ್ಷರು ಪೈಂಟರ್ ರಾಮು, ಜೆ.ಎನ್. ಜಾಲರಿ, ಕನ್ವೀನರ್ ಮಂಜು, ಗ್ರಾಮ ಲೆಕ್ಕಿಗ ಸಂಜಯ್, ಗ್ರಾಮ ಸಹಾಯಕ ಶ್ರೀನಿವಾಸ್ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.