ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇಲ್ಲಿ ವಾಸಿಸುತ್ತಿರುವ ಎಲ್ಲ ಭಾಷಿಕರಿಗೂ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ. ಎಲ್.ದೇವರಾಜು ಹೇಳಿದರು.ಪಟ್ಟಣದ ಎಂ.ಕೆ.ಬೊಮ್ಮೆಗೌಡ ವೃತ್ತದಲ್ಲಿ ಸ್ನೇಹಿತರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಬಾವುಟ ಹಾರಿಸಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಭಾಷೆಗಳ ಅಧಾರದ ಮೇಲೆಯೇ ಭಾರತ ಗಣರಾಜ್ಯಗಳ ಉದಯವಾಗಿದೆ. ದೇಶದ ಪ್ರತಿಯೊಂದು ಭಾಷಿಕ ಕುಲಗಳು ಉಳಿದು ಬೆಳೆದಾಗಲೇ ಅಖಂಡ ಭಾರತ ಗಟ್ಟಿಯಾಗಿರಲು ಸಾಧ್ಯ ಎಂದರು.
ಭಾಷಾವಾರು ಪ್ರ್ಯಾಂತ ರಚನೆಯ ಉದ್ದೇಶ ಕರ್ನಾಟಕದ ಮಟ್ಟಿಗೆ ಈಡೇರಿಲ್ಲ. ಇಂದಿಗೂ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಕರ್ನಾಟಕದ ಉದ್ಯೋಗಗಳು ಅನ್ಯರ ಪಾಲಾಗುತ್ತಿವೆ. ಕನ್ನಡ ಅನ್ನ ಕೊಡುವ ಭಾಷೆಯಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಕನ್ನಡದ ನೆಲದಲ್ಲಿ ಹಿಂದಿ ಏರಿಕೆಗೆ ಹುನ್ನಾರ ನಡೆಸುತ್ತಿದೆ. ಕನ್ನಡ ಸಾಲೆಗಳು ಮುಚ್ಚುವ ವಾತಾವರಣವನ್ನು ಕನ್ನಡಿಗರೇ ನಿರ್ಮಿಸುತ್ತಿದ್ದಾರೆ. ಕರ್ನಟಕದ ನೆಲದಲ್ಲಿಯೇ ಅನ್ಯ ಭಾಷಿಕರು ಕನ್ನಡ ಮಾತನಾಡದಂತೆ ಕನ್ನಡಿಗರ ಮೇಲೆ ಹಲ್ಲೆ ಮತ್ತು ದಬ್ಬಾಳಿಕೆ ನಡೆಸುವ ಮಟ್ಟಕ್ಕೆ ಬಂದು ನಿಂತಿದ್ದರೂ ಕನ್ನಡಿಗರು ಮಾತ್ರ ಕನ್ನಡ ಪರವಾದ ಸಂಘಟಿತ ಶಕ್ತಿಯಾಗಿ ರೂಪುಗೊಳ್ಳುತ್ತಿಲ್ಲ ಎಂದು ವಿಷಾದಿಸಿದರು.
ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ನಾವು ತೋರಿಕೆಗಾಗಿ ನವೆಂಬರ್ ಕನ್ನಡಿಗರಾಗದೆ ನಮ್ಮ ಕಣ ಕಣದಲ್ಲಿಯೂ ಕನ್ನಡತನವನ್ನು ಬೆಳೆಸಿಕೊಂಡು ಕನ್ನಡ ನೆಲ, ಜಲ ಹಾಗೂ ಭಾಷಗೆ ವಿಪತ್ತು ಎದುರಾದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿರಬೇಕು ಎಂದು ಮನವಿ ಮಾಡಿದರು.ಈ ವೇಳೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ. ಹರಿಚರಣತಿಲಕ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿ.ಬಿ.ಚೇತನ ಕುಮಾರ್, ಹಿರಿಯ ವಕೀಲ ಜಿ.ಆರ್.ಅನಂತರಾಮಯ್ಯ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ, ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜುನಾಥ್, ಸ್ನೇಹಿತರ ಗೆಳೆಯರ ಬಳಗದ ಅಧ್ಯಕ್ಷ ಕೆ.ಎನ್.ಕಿರಣ್, ಎಳನೀರು ವರ್ತಕರ ಸಂಘದ ಅಧ್ಯಕ್ಷ ಭಾರತಿಪುರ ಪುಟ್ಟಣ್ಣ, ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು, ಒಕ್ಕಲಿಗರ ಸಂಘದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಜಿಪಂ ಮಾಜಿ ಸದಸ್ಯ ರಾಮದಾಸ್, ತಾಪಂ ಮಾಜಿ ಅಧ್ಯಕ್ಷ ಜಯರಂಗ, ಸಾರಂಗಿ ಮಂಜುನಾಥ್, ಹೆಮ್ಮನಹಳ್ಳಿ ಗಂಗೇಗೌಡ ಇದ್ದರು.