ಇಂದಿನಿಂದ ಬಾಶೆಟ್ಟಿಹಳ್ಳಿಯಲ್ಲಿ ಕನ್ನಡ ನುಡಿಹಬ್ಬ

| Published : Feb 25 2024, 01:49 AM IST

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡದ ನುಡಿಹಬ್ಬಕ್ಕೆ ದೊಡ್ಡಬಳ್ಳಾಪುರ ತಾಲೂಕು ಸಜ್ಜಾಗಿದ್ದು, ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಫೆ.25ರ ಭಾನುವಾರ ಮತ್ತು 26ರಂದು ಸೋಮವಾರ ಸಂಭ್ರಮದಿಂದ ನಡೆಯಲಿದೆ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ದೊಡ್ಡಬಳ್ಳಾಪುರ: ಕನ್ನಡದ ನುಡಿಹಬ್ಬಕ್ಕೆ ದೊಡ್ಡಬಳ್ಳಾಪುರ ತಾಲೂಕು ಸಜ್ಜಾಗಿದ್ದು, ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಫೆ.25ರ ಭಾನುವಾರ ಮತ್ತು 26ರಂದು ಸೋಮವಾರ ಸಂಭ್ರಮದಿಂದ ನಡೆಯಲಿದೆ ಎಂದು ಬೆಂ.ಗ್ರಾ. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಹೆಸರಾಂತ ವೈದ್ಯ ಹಾಗೂ ಲೇಖಕ ಡಾ.ಟಿ.ಎಚ್.ಆಂಜಿನಪ್ಪ ಸಮ್ಮೇಳನಾಧ್ಯಕ್ಷರಾಗಿದ್ದು, 2 ದಿನಗಳ ಸಮ್ಮೇಳನದಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಪ್ರತಿಭೆಗಳು, ಹೋರಾಟದ ಚಿಂತನೆಗಳು, ಸಮಕಾಲೀನ ಸವಾಲುಗಳ ಅನಾವರಣ ವಿವಿಧ ಗೋಷ್ಠಿಗಳ ಮೂಲಕ ನಡೆಯಲಿದೆ ಎಂದು ತಿಳಿಸಿದರು.

ಸಾಹಿತ್ಯದ ಜೊತೆಗೆ ನೆಲ-ಜಲದ ಚರ್ಚೆ:

ಬೆಂ.ಗ್ರಾ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಜ್ವಲಂತ ಸಮಸ್ಯೆಗಳ ಕುರಿತು, ನೆಲ-ಜಲದ ವಿಚಾರಗಳ ವಸ್ತುಸ್ಥಿತಿಯ ಅನಾವರಣಕ್ಕೆ ವೇದಿಕೆ ಸಜ್ಜಾಗಿದೆ. ಎಲ್ಲ ವಲಯಗಳನ್ನೂ ಒಳಗೊಳ್ಳುವ ವಿಶಾಲ ದೃಷ್ಠಿಕೋನದಿಂದ ಮಕ್ಕಳ ಗೋಷ್ಠಿ, ಯುವ ಕವಿಗೋಷ್ಠಿ, ಮಹಿಳಾ ಗೋಷ್ಠಿ ಹಾಗೂ ಸವಾಲು-ಸಮಸ್ಯೆಗಳ ಕುರಿತಾದ ಗೋಷ್ಠಿಗಳನ್ನು ಆಯೋಜಿಸಿ ವಿಚಾರ ಮಂಥನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಜನವರಿಯಲ್ಲೇ ನಡೆಯಬೇಕಿದ್ದ ಸಮ್ಮೇಳನ, ಎಲ್ಲ ಸಿದ್ದತೆಗಳ ಬಳಿಕ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮುಂದೂಡಲ್ಪಟ್ಟಿತ್ತು. ಇದೀಗ ಕಾರ್ಯಕ್ರಮಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ ಎಂದರು.

ಸಮ್ಮೇಳನದ ಕಾರ್ಯಯೋಜನೆ:

ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಸಮ್ಮೇಳನ ಫೆ.25ರ ಬೆಳಗ್ಗೆ ಧ್ವಜಾರೋಹಣದ ಮೂಲಕ ಆರಂಭವಾಗಲಿದ್ದು, ಬಳಿಕ, ನವೋದಯ ವಿದ್ಯಾಲಯದ ಮುಂಭಾಗದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ನಡೆಯಲಿದೆ. ಸಮ್ಮೇಳನವನ್ನು ಬಂಡಾಯ ಸಾಹಿತಿ ಡಾ.ಎಲ್.ಹನುಮಂತಯ್ಯ ಉದ್ಘಾಟಿಸಲಿದ್ದು, ಶಾಸಕ ಧೀರಜ್ ಮುನಿರಾಜ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಕಸಾಪ ಅಧ್ಯಕ್ಷ ನಾಡೋಜ ಮಹೇಶ್‌ಜೋಶಿ, ಸಂಸದ ಬಿ.ಎನ್.ಬಚ್ಚೇಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದು, ವಿವಿಧ ಪುಸ್ತಕಗಳ ಲೋಕಾರ್ಪಣೆ, ದತ್ತಿ ಸ್ವೀಕಾರ ನಡೆಯಲಿದೆ. ಮೊದಲ ದಿನ ಕನ್ನಡ ಸಾಹಿತ್ಯಕ್ಕೆ ವೈದ್ಯ ಸಾಹಿತಿಗಳ ಕೊಡುಗೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಪರಿಸರ ಕುರಿತ ಗೋಷ್ಠಿಗಳು, ಯುವ ಕವಿಗೋಷ್ಠಿ, ರಂಗಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ.26ರಂದು ಮಕ್ಕಳ ಗೋಷ್ಠಿ ನಡೆಯಲಿದ್ದು, ಬಳಿಕ ಮಹಿಳಾ ವಿಚಾರಗೋಷ್ಠಿ, ಸಾಧಕರಿಗೆ ಗೌರವ ಸಮರ್ಪಣೆ, ಕವಿಗೋಷ್ಠಿ, ಸಮಾರೋಪ ಸಮಾರಂಭಗಳು ನಡೆಯಲಿವೆ. ಸಮ್ಮೇಳನಾಧ್ಯಕ್ಷ ಡಾ.ಟಿ.ಎಚ್.ಆಂಜನಪ್ಪ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಸಾಹಿತಿ, ಕಲಾವಿದರಿಗೆ ಆದ್ಯತೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಂ.ಗ್ರಾ. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುನಿರಾಜು, ತಾ.ಕಸಾಪ ಕಾರ್ಯದರ್ಶಿ ಎ.ಜಯರಾಮ್, ನಿವೃತ್ತ ಅಧ್ಯಾಪಕ ವಿ.ಎಸ್.ಹೆಗ್ಡೆ, ವೆಂಕಟರಾಜು ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್‌.............

ಸಮ್ಮೇಳನದಲ್ಲಿ ಇಂದು:

ಫೆ.25ರಂದು ಭಾನುವಾರ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ, ಬಳಿಕ ನವೋದಯ ವಿದ್ಯಾಲಯದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ 10 ಗಂಟೆಗೆ ಬಂಡಾಯ ಸಾಹಿತಿ ಡಾ.ಎಲ್.ಹನುಮಂತಯ್ಯ ಅವರಿಂದ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಶಾಸಕ ಧೀರಜ್ ಮುನಿರಾಜ್ ಅಧ್ಯಕ್ಷತೆ ವಹಿಸುವರು. ಈ ವೇಳೆ ದತ್ತಿ ಸ್ವೀಕಾರ, ಪುಸ್ತಕ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಕನ್ನಡ ಸಾಹಿತ್ಯಕ್ಕೆ ವೈದ್ಯ ಸಾಹಿತಿಗಳ ಕೊಡುಗೆ ಕುರಿತ ಗೋಷ್ಠಿ ನಡೆಯಲಿದೆ, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಡಾ.ನಾ.ಸೋಮೇಶ್ವರ, ಡಾ.ಸಲೀಂ ನದಾಫ್, ಡಾ.ಶಾಂತಲಾ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಮತ್ತು ಪರಿಸರ ಗೋಷ್ಠಿ ವಕೀಲ ಎಂ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಡಾ.ಪ್ರಕಾಶ್‌ ಮಂಟೇದ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ.24ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಲಾಂಛನ.