ನಗರ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನಾಡುತ್ತಾರೆ. ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಭಾಷೆ ಉಳಿವು ಸಾಧ್ಯ. ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದು ಅವಶ್ಯಕ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಶಾಸಕ ಕೆ.ಎಸ್.ಬಸವಂತಪ್ಪ ಅಭಿಮತ । ದಾವಣಗೆರೆ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ-2026- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ ಪ್ರದೇಶಗಳಲ್ಲಿ ವಿಭಿನ್ನ ಭಾಷೆಗಳನ್ನಾಡುತ್ತಾರೆ. ಕನ್ನಡ ಭಾಷೆಯನ್ನು ಮಾತ್ರ ಮಾತನಾಡುವ ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಭಾಷೆ ಉಳಿವು ಸಾಧ್ಯ. ಶಾಲಾ, ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವುದು ಅವಶ್ಯಕ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಭಾನುವಾರ ದಾವಣಗೆರೆ ತಾಲೂಕು ಸಾಹಿತ್ಯ ಪರಿಷತ್ತು ಕುರ್ಕಿ- ಹಿರೇತೊಗಲೇರಿ ಗ್ರಾಮದ ಕಮಲಮ್ಮ ಗುರುಶಾಂತಪ್ಪ ಸಮುದಾಯ ಭವನದ ಬಳಿ ಎರ್ಪಡಿಸಿದ್ದ ದಾವಣಗೆರೆ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ-2026 ಉದ್ಪಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಕನ್ನಡವನ್ನು ಬೆಳೆಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ತಾಲೂಕು ಸಾಹಿತ್ಯ ಸಮ್ಮೇಳನ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲಿಯೇ ವಿಭಿನ್ನವಾಗಿದೆ. ಪರಿಷತ್ ಅಷ್ಟೊಂದು ಶ್ರೀಮಂತಿಕೆ ಒಳಗೊಂಡಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಮತ್ತು ಮುಂದಿನ ಪೀಳಿಗೆಯವರಿಗೆ ನಾವು ಕನ್ನಡ ಸಾಹಿತ್ಯ ಉಳಿಸಿ ಬೆಳೆಸಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ರಾಜ್ಯದ ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಮಾಡಿ ಕನ್ನಡ ಸಾಹಿತ್ಯದ ನಿರಂತರ ಶಿಬಿರಗಳನ್ನು ಏರ್ಪಡಿಸಬೇಕು ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯಪುಸ್ತಕವನ್ನು ಇಟ್ಟು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಅಭ್ಯಾಸಿಸಲು ಅನುಕೂಲ ಆಗುವಂತಹ ಕೆಲಸ ಆಗಬೇಕಾಗಿದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಸಮಾನತೆ ಮತ್ತು ಸಹಬಾಳ್ವೆ ಬೇಕಾದಲ್ಲಿ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಬೆಳೆಸಬೇಕು. ಆಗ ನಮ್ಮವರು ಎಂಬ ಭಾವನೆ ನಮ್ಮಲ್ಲಿ ಮೂಡಲಿದೆ ಎಂದರು.

ಹಿರೇತೊಗಲೇರಿ ಶಾಲೆ ಅಭಿವೃದ್ಧಿಪಡಿಸಲು ಅನುಮತಿ ನೀಡಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ದೇಗುಲವಿದ್ದಂತೆ. ಅಲ್ಲಿ ತಪ್ಪುಗಳಿಗೆ ಅವಕಾಶ ನೀಡಬಾರದು. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪಾರದರ್ಶಕತೆಯಿಂದ ನಡೆಯಬೇಕು. ಅದಕ್ಕೆ ನಾವು ನೀವು ಕೈ ಜೋಡಿಸಬೇಕು ಎಂದರು.

ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ, ಸಾಹಿತಿ, ಚಿಂತಕ ಡಾ.ಬಸವರಾಜ ಸಾದರ ಪ್ರಧಾನ ಭಾಷಣ ಮಾಡಿ, ಇಂದು ಏನಾದರೂ ದೇಶಕ್ಕೆ ಭವಿಷ್ಯವಿದ್ದರೆ ಅದು ಹಳ್ಳಿಗಳಿಂದ ಮಾತ್ರ ಸಾಧ್ಯ. ದಾವಣಗೆರೆ ರಾಜ್ಯದ ರಾಜಧಾನಿ ಆಗಬೇಕಾಗಿತ್ತು. ಕಾರಣ ಇದು ರಾಜ್ಯದ ಮಧ್ಯಭಾಗವಾಗಿದೆ. ಅಲ್ಲದೇ ವಾಣಿಜ್ಯ ನಗರಿ ಮತ್ತು ಈಗ ವಿದ್ಯಾನಗರಿಯಾಗಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹುಟ್ಟಿದ್ದು ಶಿವಮೊಗ್ಗದವರು ಅವರ ವಿಧ್ಯಾಭ್ಯಾಸವಾಗಿದೆ. ಕವಿತೆ ಹುಟ್ಟಿದ್ದು ದಾವಣಗೆರೆಯಲ್ಲಿ, ಅವರು ದಾವಣಗೆರೆ ಕುರಿತು ಪದ್ಯವನ್ನು ಸಹ ಬರೆದಿದ್ದಾರೆ ಎಂದರು.

ಕವಿರಾಜ ಮಾರ್ಗದಲ್ಲಿ ಇವತ್ತಿನ ನಮ್ಮ ಸಮಾಜದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ವಿವರಿಸಲಾಗಿದೆ. ನಿಜವಾದ ಬಂಗಾರವೆಂದರೆ ಇನ್ನೊಬ್ಬರ ಧರ್ಮವನ್ನು ನಿನ್ನ ಧರ್ಮವೆಂದು ಗೌರವಿಸುವುದಾಗಿದೆ. ಇನ್ನೊಬ್ಬರ ವಿಚಾರಗಳನ್ನು ಕಿವಿಯಾಗಿ ತೂಗಿ ನೋಡಿ ಸರಿಯಾದ ವಿಚಾರ ಮಾಡುವುದು ಧರ್ಮವೆಂದು ತಿಳಿಸುತ್ತಾರೆ. ಸಾಹಿತ್ಯ ಮತ್ತು ಮನುಷ್ಯನ ಸಂಬಂಧಗಳ ಬಗ್ಗೆ ಗಮನಿಸಿದಾಗ ಸಾಹಿತ್ಯ ಒಂದು ಮನಃ ಪರಿವರ್ತನೆ ಸಾಧನವಾಗಿದೆ ಎಂದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿದರು, ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ ಆಶಯ ನುಡಿಗಳಾಡಿದರು. ಬಿಐಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಗುರೂಜಿ, ಕೆ.ಬಿ. ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷರಾದ ಸಿದ್ದೇಶ್ ಕುರ್ಕಿ ಮಾತನಾಡಿದರು.

ಕೃತಿಗಳ ಬಿಡುಗಡೆ:

ಕಸಾಪ ವತಿಯಿಂದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಿದ್ದೇಶ್ ಕುರ್ಕಿ ಅವರ ಕೃತಿಗಳಾದ ವಿಜ್ಞಾನಧಾರೆ ಮತ್ತು ಸೌರಕುಟುಂಬ ನಾಟಕ, ಎಚ್.ಕೆ. ಸತ್ಯಭಾಮ ಮಂಜುನಾಥ್ ಅವರ ಕವನ ಸಂಕಲನ ಅಂತಃಸಾಕ್ಷಿ, ಎಚ್.ಎನ್. ಮಮತ ನಾಗರಾಜ್ ಅವರ ಕಿರುನಾಟಕಗಳ ಸಂಕಲನ ಜೀವನಾಡಿ, ಪ್ರತಿಭಾ ಆರ್. ಅವರ ನೆನಪಿನ ಬುತ್ತಿ ತಾತ ಪ್ರತಿಧ್ವನಿಗಳು ಹಾಗೂ ಕೆ.ರಾಘವೇಂದ್ರ ನಾಯರಿ ಅವರ ಕುರ್ಕಿ- ಹಿರೇತೊಗಲೇರಿ ಅಪೂರ್ವ ಸಂಗಮ ನುಡಿತೇರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಕುರ್ಕಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಗಿತ್ತು. ಪ್ರಗತಿಪರ ರೈತರಾದ ಕಮಲಮ್ಮ ಗುರುಶಾಂತಪ್ಪ, ರೇವಣಸಿದ್ದಪ್ಪ ಓದೋಗೌಡರು, ವೇದಮೂರ್ತಿ ಗೌಡ್ರು ಹಾಗೂ ಇತರರು ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ತಾಲೂಕು ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಇತರರು ಭಾಗವಹಿಸಿದ್ದರು.

- - -

(ಬಾಕ್ಸ್‌) * ಆಡಳಿತ ಭಾಷೆ ಸಂಪೂರ್ಣ ಕನ್ನಡವಾಗಲಿ: ಸಮ್ಮೇಳನಾಧ್ಯಕ್ಷ ದಾವಣಗೆರೆ: ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಐತಿಹ್ಯ ಹೊಂದಿದ ಭಾಷೆಯನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಭಾಷೆ ಉಳಿಸುವ, ಬೆಳೆಸುವ ಔದಾರ್ಯ ಆಡಳಿತ ವರ್ಗದಲ್ಲಿ ಕಾಣುತ್ತಿಲ್ಲ. ಕನ್ನಡ ಭಾಷೆಯನ್ನು ಉಳಿಸುವ ಪಣವನ್ನು ಪ್ರತಿಯೊಬ್ಬರೂ ತೊಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್.ಸಿದ್ದೇಶ್ ಕುರ್ಕಿ ಹೇಳಿದರು.ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಅವರು, ಕೋರ್ಟು, ಬ್ಯಾಂಕ್ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಕಚೇರಿಯಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು. ರಾಜಕಾರಣಿಗಳು ಹುಸಿ ಕನ್ನಡ ಪ್ರೇಮ ಪ್ರದರ್ಶನ ಮಾಡುವುದನ್ನು ಬಿಟ್ಟು ಕನ್ನಡದ ಮೇಲೆ ನೈಜ ಕಾಳಜಿ ತೋರಬೇಕು ಎಂದರು.

ಬ್ರಿಟಿಷರು ಕೂಡ ಕರ್ನಾಟಕದ ಸಂಸ್ಕೃತಿ ಗೌರವಿಸುತ್ತಿದ್ದರು. ಅಂದು ಸರ್ಕಾರಿ ಆದೇಶಗಳು ಕನ್ನಡದಲ್ಲಿ ಕೂಡ ಹೊರಬರುತ್ತಿದ್ದವು. ಸಾಹಿತ್ಯ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡದ ಮೇಲೆ ರಾಜಕಾರಣಿಗಳು, ಸಚಿವರು ಅಭಿಮಾನ ವ್ಯಕ್ತಪಡಿಸುತ್ತಾರೆ. ಈ ಅಭಿಮಾನ ಆಡಳಿತದಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡದ ಮೇಲಿನ ಅಭಿಮಾನ ಹೆಚ್ಚು. ನಗರ ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ ಮರೆಯಾಗುತ್ತಿದೆ. ಹಳ್ಳಿಯಲ್ಲಿ ಸಾಹಿತ್ಯ ಸಮ್ಮೇಳನ ಸಂಘಟನೆ ಶ್ಲಾಘನೀಯ. ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆ ಸರ್ಕಾರ ಕೈಬಿಡಬೇಕು. ರಾಜ್ಯದ ಪ್ರತಿ ಶಾಲೆಯಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಕೃತಿಗಳು ಕನ್ನಡದಲ್ಲಿ ಹೆಚ್ಚು ಪ್ರಕಟಗೊಳ್ಳಬೇಕು. ಕನ್ನಡ ಭಾಷೆಯ ಸಾಹಿತ್ಯ ಕೃತಿಗಳನ್ನು ಖರೀದಿಸಲು ಸರ್ಕಾರ ಗ್ರಂಥಾಲಯ ಇಲಾಖೆಗೆ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ನೇಮಕಾತಿಯಲ್ಲಿ ಕನ್ನಡ ಭಾಷಿಕರಿಗೆ ಹೆಚ್ಚು ಒತ್ತು ನೀಡಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಹಕ್ಕೊತ್ತಾಯ ಮಾಡಿದರು.

- - --18ಕೆಡಿವಿಜಿ42:

ಸಮ್ಮೇಳನದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಶಾಸಕ ಕೆ.ಎಸ್.ಬಸವಂತಪ್ಪ, ಸಮ್ಮೇಳನಾಧ್ಯಕ್ಷ ಎಸ್.ಸಿದ್ದೇಶ್ ಕುರ್ಕಿ ಇತರರು ಇದ್ದರು.

- - -

-18ಕೆಡಿವಿಜಿ32, 33:

ದಾವಣಗೆರೆ ತಾಲೂಕು ಸಾಹಿತ್ಯ ಪರಿಷತ್ತು ಕುರ್ಕಿ- ಹಿರೇತೊಗಲೇರಿ ಗ್ರಾಮದಲ್ಲಿ ನಡೆದ ದಾವಣಗೆರೆ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆ.ಎಸ್. ಬಸವಂತಪ್ಪ ಉದ್ಪಾಟಿಸಿ ಮಾತನಾಡಿದರು.