ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇಡೀ ವಿಶ್ವದಲ್ಲಿಯೇ ಕನ್ನಡ ರಂಗಭೂಮಿಗೆ ಸಿಕ್ಕಿರುವ ವಿಶಿಷ್ಟ ಗೌರವಕ್ಕೆ ಇಲ್ಲಿನ ಮಣ್ಣಿನ ಗುಣ ಹಾಗೂ ಜಾನಪದ ಕಾರಣ ಎಂದು ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಹೇಳಿದರು.ರೋಟರಿ ಮೈಸೂರು ಉತ್ತರ ಹಾಗೂ ಕದಂಬ ರಂಗವೇದಿಕೆಯು ಶುಕ್ರವಾರ ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ರೋಟರಿ- ಕದಂಬ ರಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೈಸೂರಿನಲ್ಲಿ ರಾಜರ ಕಾಲದಿಂದಲೂ ನಾಟಕಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಗುಬ್ಬಿ ವೀರಣ್ಣ ಕಂಪನಿಯನ್ನು ಕರೆಸಿ, ಜಗನ್ಮೋಹನ ಅರಮನೆಯಲ್ಲಿ ರಾಜರು ನಾಟಕ ಮಾಡಿಸಿ, ಪ್ರೋತ್ಸಾಹಿಸಿದ್ದರು. ಈಗಲೂ ಕೂಡ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿದರೆ ಜನ ಖಂಡಿತಾ ಬೆಂಬಲ ನೀಡುತ್ತಾರೆ. ಉತ್ತಮ ನಾಟಕಕ್ಕೆ ಸೋಲೇ ಇಲ್ಲ. ಜನ ಬಂದೇ ಬರುತ್ತಾರೆ ಎಂದು ಅವರು ಹೇಳಿದರು.ಸುಳ್ಳನ್ನು ಹೇಳುತ್ತಲೆ ಸತ್ಯವನ್ನು ಅನಾವರಣ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆ ಮೂಲಕ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತಿದೆ ಎಂದು ಅವರು ಹೇಳಿದರು.
ನಾನು ಬಿಡುವಿದ್ದಾಗ ಇತರರ ನಾಟಕವನ್ನು ನೋಡುತ್ತೇನೆ. ಅದೇ ರೀತಿ ಪೋಷಕರು ಮಕ್ಕಳಿಗೆ ಕನ್ನಡದ ಜೊತೆಗೆ ಇತರ ಭಾಷೆಗಳನ್ನು ಕಲಿಸಬೇಕು. ಆದರೆ ಕನ್ನಡಕ್ಕೆ ಆದ್ಯತೆ ನೀಡಬೇಕು. ''''''''ಒಬಮಾ'''''''' (ಓದುವುದು, ಬರೆಯುವುದು, ಮಾತನಾಡುವುದು) ಮೂಲಕ ಕನ್ನಡವನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.ನನಗೆ ಹತ್ತು ವರ್ಷಗಳ ಹಿಂದೆ ರೋಟರಿ- ಕದಂಬ ಪ್ರಶಸ್ತಿ ನೀಡಿದಾಗ ನನ್ನ ತಂದೆ- ತಾಯಿ ಇದ್ದರು. ಇವತ್ತು ಅವರ ಸ್ಥಾನದಲ್ಲಿ ಅಣ್ಣ-ಅಕ್ಕ ಬಂದಿದ್ದಾರೆ. ಇದೇ ವೇದಿಕೆಯಲ್ಲಿ ನನ್ನ ಮಗಳು ದಿಶಾಗೆ ಪ್ರಶಸ್ತಿ ನೀಡಿರುವುದು ನನಗೆ ದಿವ್ಯ ಕ್ಷಣ. ಆಕೆಗೆ ರಂಗಭೂಮಿಯ ಜವಾಬ್ದಾರಿಯನ್ನು ನೆನಪಿಸುವ, ಕೆಲಸ ಮಾಡಬೇಕು ಎಂದು ಎಚ್ಚರಿಸುವ ಕ್ಷಣ ಎಂದು ಅವರು ಬಣ್ಣಿಸಿದರು.
ರಂಗಭೂಮಿಗೆ ಬಂದು 30 ವರ್ಷಗಳಾಗಿವೆ, ಈವರೆಗೆ 340 ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರಂಗಾಯಣದಲ್ಲಿ ಬಿ.ವಿ., ಕಾರಂತರು ಕ್ಯಾತನಹಳ್ಳಿ ರಾಮಣ್ಣ ಅವರ ಮೂಲಕ ಕಂಸಾಳೆ ಕಲಿಸದಿದ್ದರೆ ನಾನು ''''''''ಜನುಮದ ಜೋಡಿ'''''''' ಚಿತ್ರದಲ್ಲಿ ಶಿವರಾಜ್‌ಕುಮಾರ್‌ಅವರ ಜೊತೆ ''''''''ಕೋಲುಮಂಡೆ ಜಂಗಮದೇವ..'''''''' ಎಂದು ಕಂಸಾಳೆ ನೃತ್ಯ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂದರು.ಅಶ್ವತ್ಥ್ ಕದಂಬ ಅವರು ಅದ್ಭುತ ಪ್ರಸಾಧನ ಕಲಾವಿದ. ಧನಂಜಯ ಅವರು ಅದ್ಭುತ ನಟ ಎಂದು ಅವರು ಶ್ಲಾಘಿಸಿದರು.
ರೋಟರಿ ಸಂಸ್ಥೆಯವರು ಕೇವಲ ಇಂಗ್ಲಿಷ್ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಕಲೆ, ಕಲಾವಿದರಿಗೂ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ ಎಂದರು.ನಟ, ನಿರ್ದೇಶಕ ಯು.ಎಸ್. ರಾಮಣ್ಣ, ನಟ, ಪ್ರಸಾಧನ ಪಟು, ವಿನ್ಯಾಸಕ ಅಶ್ವತ್ಥ್ ಕದಂಬ, ನಟ, ನಿರ್ದೇಶಕ ಎನ್. ಧನಂಜಯ ಹಾಗೂ ನಟಿ, ನಿರ್ದೇಶಕಿ, ಗಾಯಕಿ ದಿಶಾ ರಮೇಶ್‌ಅವರಿಗೆ ರೋಟರಿ- ಕದಂಬ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ಪ್ರದಾನ ಮಾಡಿದರು. ರೋಟರಿ ಉತ್ತರ ಅಧ್ಯಕ್ಷ ಪಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಲ್.ಆರ್. ಮಹದೇವಸ್ವಾಮಿ ಇದ್ದರು. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸ್ವಾಗತಿಸಿದರು. ಶಿವಕುಮಾರ್ ನಿರೂಪಿಸಿದರು.