ಇಂದಿನ ಯುವ ಪೀಳಿಗೆಗೆ ಸಾಹಿತ್ಯ ಕೃತಿಗಳನ್ನು ವಿವಿಧ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡುವ ಪರಂಪರೆಯನ್ನು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗವು ಹಾಕಿಕೊಟ್ಟಿದೆ

ಹೊಸಪೇಟೆ: ಇಂದಿನ ಯುವ ಪೀಳಿಗೆಗೆ ಸಾಹಿತ್ಯ ಕೃತಿಗಳನ್ನು ವಿವಿಧ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡುವ ಪರಂಪರೆಯನ್ನು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗವು ಹಾಕಿಕೊಟ್ಟಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿರೂಪಾಕ್ಷ ಪೂಜಾರಹಳ್ಳಿ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಲ್ಲಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೃತ್ತಿಯಿಂದ ನಿವೃತ್ತಿ ಹೊಂದಿದ ಡಾ.ವೆಂಕಟೇಶ ಇಂದ್ವಾಡಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವೆಂಕಟಗಿರಿ ದಳವಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿವೃತ್ತಿ ಎಂಬುದು ಕೇವಲ ನೌಕರಿಗೆ ಸೀಮಿತ. ಜೀವನದ ಫಯಣದಲ್ಲಿ ನೌಕರರು ನಿವೃತ್ತಿ ಹೊಂದುವುದಿಲ್ಲ. ಆದರೂ ಕಾಲನ ಜೊತೆ ಪ್ರತಿಯೊಬ್ಬರೂ ಹೆಜ್ಜೆ ಇಡಬೇಕಾದುದು ತುಂಬ ಅಗತ್ಯ ಎಂದರು.

ಸೇವೆಯಿಂದ ನಿವೃತ್ತಿ ಹೊಂದಿದ ಪ್ರೊ. ವೆಂಕಟೇಶ ಇಂದ್ವಾಡಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬೇರೆ ವಿಶ್ವವಿದ್ಯಾಲಯಕ್ಕೆ ಹೋಲಿಸಿದರೆ ಕನ್ನಡ ವಿಶ್ವವಿದ್ಯಾಲಯದ ಸಂಶೋಧನ ಕೃತಿಗಳು ತಮ್ಮದೇ ಆದ ಮೌಲ್ಯವನ್ನು ಉಳಿಸಿಕೊಂಡಿವೆ. ಆದರೂ ಇಂದಿನ ವಿದ್ಯಾರ್ಥಿಗಳು ಕೇವಲ ಗೂಗಲ್ ಮಾಹಿತಿ ಪಡೆದುಕೊಳ್ಳುವ ಭರದಲ್ಲಿ ಅಧ್ಯಯನದ ಕೊರತೆ ಕಂಡುಬರುತ್ತಿರುವುದು ಖೇದದ ಸಂಗತಿಯಾಗಿದೆ ಎಂದು ಹೇಳಿದರು.

ಪ್ರೊ. ವೆಂಕಟೇಶ ಇಂದ್ವಾಡಿ ಅವರ ಕುರಿತಾಗಿ ಡಾ.ಮಲ್ಲಿಕಾರ್ಜುನ ವಣೆನೂರ್, ಡಾ.ಗೋವಿಂದ, ಪಿಎಚ್.ಡಿ ಪಡೆದ ವಿದ್ಯಾರ್ಥಿಗಳಾದ ಸತೀಶ ಪಾಟೀಲ್, ಉಷಾ, ಮುದ್ದುವೀರಪ್ಪ, ಗೋವಿಂದಮ್ಮ, ಶಿಲ್ಪಾ, ವೆಂಕಮ್ಮ, ಸತೀಶ, ಗಾದೆಪ್ಪ ಮುತ್ತಯ್ಯ ಸಭೆಯಲ್ಲಿ ಮಾತನಾಡಿದರು.

ಸಂಶೋಧಕಿ ವಿನುತಾ ಪ್ರಾರ್ಥಿಸಿದರು. ಮಂಜುಳಾ ಸ್ವಾಗತಿಸಿದರು. ಸಂತೋಷ ನಿರೂಪಿಸಿದರು. ನಂದಿನಿ ವಂದಿಸಿದರು.