ಸಾರಾಂಶ
ಅ.೫ ರ ಶನಿವಾರ ಗುಂಡ್ಲುಪೇಟೆ ಘಟಕಕ್ಕೆ ಸೇರಿದ ಕೆಎ 10 ಎಫ್ 0407 ನಂಬರಿನ ಸಾರಿಗೆ ಬಸ್ ನ ಟಿಕೆಟ್‌ನಲ್ಲಿ ಕನ್ನಡ ಪದಗಳಲ್ಲಿ ದೋಷ ಕಂಡು ಬಂದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಗುಂಡ್ಲುಪೇಟೆ ಘಟಕದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡ ಭಾಷೆಯ ಪದಗಳಲ್ಲಿ ದೋಷ ಕಾಣಿಸಿಕೊಂಡಿದೆ.ಅ.5ರಂದು ಗುಂಡ್ಲುಪೇಟೆ ಘಟಕಕ್ಕೆ ಸೇರಿದ ಕೆಎ 10 ಎಫ್ 0407 ನಂಬರಿನ ಸಾರಿಗೆ ಬಸ್‌ನ ಟಿಕೆಟ್ ನೋಡಿದರೆ ಕನ್ನಡದ ಪದ ಬಳಕೆಯಲ್ಲಿ ತಪ್ಪು ಕಂಡುಬಂದಿದೆ. ಬಸ್ ಟಿಕೆಟ್‌ನಲ್ಲಿ ಕನ್ನಡಪ್ರಭದ ಕಣ್ಣಿಗೆ ಕಂಡ ಪ್ರಕಾರ ಟಿಕೆಟ್‌ನಲ್ಲಿ ಆಂಗ್ಲ ಪದಗಳಲ್ಲಿ ಯಾವುದೇ ತಪ್ಪುಗಳು ಕಂಡು ಬಂದಿಲ್ಲ. ಆದರೆ ಕನ್ನಡದ ಅಕ್ಷರಗಳಲ್ಲಿ ಕೆಲವು ದೋಷಗಳಿಂದ ಕೂಡಿದೆ.
ಕರ್ನಾಟಕದಲ್ಲಿ ಕನ್ನಡವೇ ಅಗ್ರ ಭಾಷೆ ಆದರೆ ಕೆಎ 10 ಎಫ್ 0407 ನಂಬರಿನ ಸಾರಿಗೆ ಬಸ್‌ನ ಟಿಕೆಟ್‌ನಲ್ಲಿ ಗುಂಡ್ಲುಪೇಟೆ ಬದಲಿಗೆ ಗಂಡುಲುಪೇಟೆ ಎಂದು, ಮೈಸೂರು ಬದಲಿಗೆ ಮೈಸರು ಎಂದು ತಪ್ಪುಗಳು ಎದ್ದು ಕಾಣುತ್ತಿವೆ. ಇದೇನಾ ಸಾರಿಗೆ ಸಂಸ್ಥೆಯ ಕನ್ನಡದ ಪ್ರೇಮ, ಪ್ರೀತಿ, ಅಭಿಮಾನ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾಜ್ಯದಲ್ಲಿ ಕನ್ನಡ ಭಾಷೆ ಮೊದಲ ಭಾಷೆ, ಮಾತೃ ಭಾಷೆ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದೆಲ್ಲ ಹೇಳುತ್ತಿರುವ ಸಮಯದಲ್ಲಿ ಸಾರಿಗೆ ಬಸ್ ಟಿಕೆಟ್‌ನಲ್ಲಿ ಕನ್ನಡದ ಪದಗಳು ತಪ್ಪಾಗಿವೆ ಇದು ಸರೀನಾ ಎಂದು ಸಾರಿಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಾಪ್ಟ್ ವೇರ್ ಪ್ರಾಬ್ಲಮ್ಮು ಎಂದು ಹೇಳುತ್ತಿದ್ದಾರೆ ಎಂದು ಪಂಜನಹಳ್ಳಿ ನಾಗೇಂದ್ರ ಆರೋಪಿಸಿದ್ದಾರೆ.