ಕರ್ನಾಟಕ ಗಡಿ ಭಾಗಗಳಲ್ಲಿ ಪ್ರಾಧಿಕಾರ ಮೂಲಕ ಕನ್ನಡ ಕೆಲಸ: ಸೋಮಣ್ಣ ಬೇವಿನಮರದ

| Published : Jul 18 2024, 01:38 AM IST

ಸಾರಾಂಶ

ಕಾಸರಗೋಡು ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ‘ಸಾಂಸ್ಕೃತಿಕ ಉತ್ಸವ ಹಾಗೂ ಸಿರಿಬಾಗಿಲು ಯಕ್ಷ ವೈಭವ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಮ್ಮ ಭಾಷೆ, ಸಂಸ್ಕೃತಿ, ಕಲೆಯನ್ನು ಬೆಳೆಸುವಂತಹ ಮಹತ್ತರ ಕೆಲಸವು ಗಡಿನಾಡಿನಲ್ಲಿ ನಡೆಯುತ್ತಿದೆ. ಕರಾವಳಿ ಭಾಗದವರು ಕಲೆಗೆ ನೀಡುವಂತಹ ಪ್ರೋತ್ಸಾಹ ಮೆಚ್ಚುವಂತದ್ದಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಹೇಳಿದರು.

ಅವರು ಕಾಸರಗೋಡು ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಗಡಿ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ನಡೆದ ‘ಸಾಂಸ್ಕೃತಿಕ ಉತ್ಸವ ಹಾಗೂ ಸಿರಿಬಾಗಿಲು ಯಕ್ಷ ವೈಭವ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕರ್ನಾಟಕ ಸಂಭ್ರಮ-50 ಇದರ ಸವಿ ನೆನಪಿನಂಗವಾಗಿ ಮಂಗಳೂರಿನಲ್ಲಿ ದೊಡ್ಡ ಕನ್ನಡ ಕಾರ್ಯಕ್ರಮವನ್ನು ಇಟ್ಟುಕೊಳ್ಳುವ ಸಲುವಾಗಿ ಈಗಾಗಲೇ ಕರ್ನಾಟಕದ 14 ಅಕಾಡೆಮಿಗಳ ನೇತೃತ್ವದಲ್ಲಿ ಸಚಿವರು ಸಭೆ ಕರೆದು ನಿರ್ಣಯ ಮಾಡಲಾಗಿದೆ. ಅಲ್ಲಿ ಕನ್ನಡ ಭಾಷೆ, ಕಲೆಗಳನ್ನು ಪ್ರೋತ್ಸಾಹಿಸುವರಿಗೆ ಗೌರವವನ್ನು ಸಲ್ಲಿಸಬೇಕು. ಸರ್ಕಾರದ ಸಹಾಯದಿಂದ ಮಾತ್ರ ಕಲೆಗಳನ್ನು ಉಳಿಸಲು ಸಾಧ್ಯ. ಅದಕ್ಕಾಗಿ ಗಡಿ ಪ್ರದೇಶ ಅಭಿವೃದ್ಧಿ ಸಾಕಷ್ಟು ಅನುದಾನವನ್ನು ನೀಡುತ್ತಿದೆ. ಇದಲ್ಲದೇ ಗಡಿನಾಡಿನ ಕನ್ನಡ ಶಾಲೆಗಳಿಗೆ ಅನುದಾನ, ಕನ್ನಡ ಶಾಲೆಗಳಲ್ಲಿ ಕನ್ನಡ ಬಲ್ಲ ಶಿಕ್ಷಕ ನೇಮಕ ವಿಚಾರ ಸೇರಿದಂತೆ ಎಲ್ಲ ವಿಷಯಗಳಲ್ಲೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿನಾಡಿನೊಂದಿಗಿದೆ ಎಂದು ಅವರು ಹೇಳಿದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕರಾವಳಿಯಲ್ಲಿ ಯಕ್ಷಗಾನ ಎಂಬುದು ನಮ್ಮ ಬದುಕಿನ ಒಂದು ಭಾಗವಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ಅನನ್ಯವಾದದ್ದು, ಇಲ್ಲಿ ಹವ್ಯಾಸಿ ತಂಡಗಳಿಂದ ಪ್ರದರ್ಶನ ನಡೆಯುವಂತದ್ದು ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಕನ್ನಡ ಅಸ್ಮಿತೆ ಉಳಿಸುವಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿಯ ಪ್ರಾಧಿಕಾರದ ಕೊಡುಗೆ ಸಹಕಾರವು ಮೆರೆಯುವಂತಿಲ್ಲ ಎಂದು ಹೇಳಿದರು.ಸಮಾರಂಭದಲ್ಲಿ ಯಕ್ಷಗಾನ ಕಲಾಪೋಷಕ, ಸಂಘಟಕ ಹೈದರಾಬಾದಿನ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸ್ವಾಮೀಜಿಯವರು ಗೌರವ ಪೋಷಕ ಸದಸ್ಯತ್ವ ನೀಡಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಗಾನ ಭಾಗವತ, ಸಿರಿಬಾಗಿಲು ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಜಗದೀಶ ಕೆ. ಕೂಡ್ಲು ಮ ನಿರೂಪಿಸಿದರು.ನಾಲ್ಕು ದಿನಗಳಲ್ಲಿ ಐದು ಜಿಲ್ಲೆಗಳಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ 27 ಹವ್ಯಾಸಿ ಯಕ್ಷಗಾನ ಕಲಾ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಅದಲ್ಲದೇ ಸ್ಥಳೀಯ ಪ್ರತಿಭೆಗಳ ಭರತನಾಟ್ಯ, ಕನ್ನಡ ಭಾವಗೀತೆಗಳ ಗಾಯನ ನಡೆಯಲಿದೆ.

ನಂತರ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿಗಳು ಕಾಸರಗೋಡು, ನೀರ್ಚಾಲು, ಪೆರ್ಲ, ಬಾಯಾರು ಮುಂತಾದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.