ಸಾರಾಂಶ
ಇಂದಿರಾ ಕ್ಯಾಂಟೀನ್‌ನಲ್ಲಿ ಮುದ್ದೆ, ಚಪಾತಿ ಸೇರಿದಂತೆ ವೈವಿಧ್ಯಮಯ ಊಟ ನೀಡಲು ಸರ್ಕಾರ ಅನುಮೋದಿಸಿತ್ತು. ಆದರೆ ಬಿಬಿಎಂಪಿ ಮುದ್ದೆ ನೀಡಿರಲಿಲ್ಲ. ಕನ್ನಡಪ್ರಭ ವರದಿ ಬಳಿಕ ಎಚ್ಚೆತ್ತ ಪಾಲಿಕೆ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ನೀಡಲು ಆರಂಭಿಸಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ ವಿತರಣೆ ಶುಕ್ರವಾರದಿಂದ ಆರಂಭಿಸಲಾಗಿದೆ.
ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾಗಿ ಮುದ್ದೆ- ಸೊಪ್ಪಿನ ಸಾರು, ಚಪಾತಿ- ಸಾಗು ಸೇರಿದಂತೆ ತರಾವರಿ ಖಾದ್ಯ ವಿತರಣೆಗೆ ಸರ್ಕಾರ ಅನುಮತಿ ಕೊಟ್ಟು ಮೂರು ತಿಂಗಳು ಕಳೆದರೂ ಇನ್ನೂ ಜಾರಿಯಾಗದ ಕುರಿತು ‘ಕನ್ನಡಪ್ರಭ’ ಶುಕ್ರವಾರ ವಿಶೇಷ ವರದಿ ಪ್ರಕಟಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಬಿಬಿಎಂಪಿಯ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನದಿಂದಲೇ ನಗರದ ವಿವಿಧ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮುದ್ದೆ ವಿವರಣೆಗೆ ಚಾಲನೆ ನೀಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶುಕ್ರವಾರ ಕೊಟ್ಟಿಗೆಪಾಳ್ಯದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಹಕರು ಶುಕ್ರವಾರದಿಂದ ಮುದ್ದೆ ವಿತರಣೆಗೆ ಸಂತಸ ವ್ಯಕ್ತಪಡಿಸಿರುವುದರೊಂದಿಗೆ ಮುಂದುವರೆಸುವಂತೆ ಕೋರಿದ್ದಾರೆ.