ಸುವರ್ಣ ನ್ಯೂಸ್ ಕಾರ್ಯಾಗಾರದಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಧೈರ್ಯ ತುಂಬುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ಸಿ.ವಿ. ಚಂದ್ರಶೇಖರ ಹೇಳಿದರು.

ಕುಷ್ಟಗಿ/ಕೊಪ್ಪಳ: ಕನ್ನಡಪ್ರಭ, ಸುವರ್ಣ ನ್ಯೂಸ್ ಕಾರ್ಯಾಗಾರದಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಧೈರ್ಯ ತುಂಬುವ ಕಾರ್ಯ ಜರುಗುತ್ತಿರುವುದು ಶ್ಲಾಘನೀಯ ಎಂದು ವಿಜಯ ಚಂದ್ರಶೇಖರ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಹೇಳಿದರು.

ಜಿಲ್ಲೆಯ ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್, ಎಸ್‌ವಿಸಿ ಶಿಕ್ಷಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಗಳದ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ (40+) ಸಿದ್ಧತಾ ಕಾರ್ಯಾಗಾರ ಅಂಗವಾಗಿ ವಿದ್ಯಾರ್ಥಿಗಳಿಗೆ ತಜ್ಞರಿಂದ ಜರುಗಿದ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕ, ಆರ್ಥಿಕ ಹಾಗೂ ಎಲ್ಲ ರೀತಿಯಿಂದಲೂ ಅಭಿವೃದ್ಧಿಯಿಂದ ವಂಚಿತವಾದ ಭಾಗವೆಂದು ಹಣ್ಣೆಪಟ್ಟಿ ಕಟ್ಟಿಕೊಂಡಿದೆ. ಪರೀಕ್ಷೆಗಳ ಫಲಿತಾಂಶದಲ್ಲಿಯೂ ಕೊನೆ ಸ್ಥಾನದಲ್ಲಿದ್ದೇವೆ. ಇದೆಲ್ಲದಕ್ಕೆ ಕಾರಣಗಳು ಹತ್ತಾರು ಇವೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರು ನಾವೇ. ಇದಕ್ಕೆ ಮಕ್ಕಳ ಮನೋಭಾವ, ಮಕ್ಕಳ ಕೌಟುಂಬಿಕ ಸಮಸ್ಯೆ, ನಂತರ ಸರ್ಕಾರ, ಪಾಲಕರು ಹಾಗೂ ಶಿಕ್ಷಕರು ಹೀಗೆ ಹಲವಾರು ಕಾರಣಗಳಿವೆ. ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ ಸಾಕಷ್ಟಿದೆ. ಸರ್ಕಾರಗಳು ಅನೇಕ ಸೌಲಭ್ಯ ಕೊಟ್ಟಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಗುಣಾತ್ಮಕ ಶಿಕ್ಷಣ ನೀಡಬೇಕು. ಆತ್ಮ ವಂಚನೆ ಮಾಡದೇ ಶಿಕ್ಷಕರು ಮಕ್ಕಳಿಗೆ ಪಾಠ ಮಾಡಬೇಕು ಎಂದರು.

ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಯಾವ ರೀತಿ ತಯಾರುಗೊಳಿಸಬೇಕು ಎಂಬುದನ್ನು ಅರಿಯಬೇಕು. ಭಗವಂತ ಎಲ್ಲರಿಗೂ ಪ್ರತಿಭೆ ಕೊಟ್ಟಿರುತ್ತಾನೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮಿಂದಾಗಬೇಕು. ಎಸ್ಸೆಸ್ಸೆಲ್ಸಿ ಅನ್ನುವುದು ವಿದ್ಯಾರ್ಥಿಗಳ ಜೀವನದ ಮೈಲಿಗಲ್ಲು. ಒಳ್ಳೆಯ ಫಲಿತಾಂಶ ಪಡೆದರೆ ಎಲ್ಲರೂ ಗೌರವದಿಂದ ಕಾಣುತ್ತಾರೆ. ಮುಂದಿನ ಭವಿಷ್ಯವನ್ನು ಬದಲಾಯಿಸಿಕೊಳ್ಳಬಹುದು ಎಂದರು.

ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ

ಕುಷ್ಟಗಿ ಭಾಗದ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಲಾಗುತ್ತಿದೆ. ಶೈಕ್ಷಣಿಕವಾಗಿ ಅನುಕೂಲವಾಗಲು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ .೯೦ಕ್ಕಿಂತ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ಪಿಯುಸಿ ತರಗತಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ಪಾಲಕರು ತಮ್ಮ ಹೊಟ್ಟೆ ಹಸಿವು ಇಟ್ಟುಕೊಂಡು ಮಕ್ಕಳು ಓದಲೇಂದು ಶಾಲೆಗೆ ಕಳಿಸಿರುತ್ತಾರೆ. ಅವರ ಹಸಿವಿಗೆ ಉತ್ತಮ ಅಂಕ ನೀಡುವುದೇ ಆಹಾರ ಇದ್ದಂತೆ. ಅವರ ಹಸಿವಿನ ಮೇಲೆ ಮಕ್ಕಳು ಅನುತ್ತೀರ್ಣ ಇಲ್ಲವೇ ಕಡಿಮೆ ಅಂಕ ಪಡೆದು ಬರೆ ಹಾಕಬಾರದು. ಮಕ್ಕಳು ತಮ್ಮ ಹುಡುಗಾಟದ ಬುದ್ಧಿ ಬಿಟ್ಟು ಉತ್ತಮ ಅಂಕ ಗಳಿಸುವತ್ತ ಹೆಜ್ಜೆ ಹಾಕಬೇಕು ಎಂದರು.