ದೇಶ ವಿದೇಶದಲ್ಲಿ ಕನ್ನಡದ ಕಹಳೆ ಮೊಳಗಿಸಲಾಗುತ್ತಿದೆ, ಅದೇ ಕನ್ನಡ ಭಾಷೆ ಮತ್ತು ಕನ್ನಡಿಗರ ಶಕ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ದೇಶ ವಿದೇಶದಲ್ಲಿ ಕನ್ನಡದ ಕಹಳೆ ಮೊಳಗಿಸಲಾಗುತ್ತಿದೆ, ಅದೇ ಕನ್ನಡ ಭಾಷೆ ಮತ್ತು ಕನ್ನಡಿಗರ ಶಕ್ತಿಯಾಗಿದೆ. ನಾವು ನೆಲ ಜಲ ಕೊಟ್ಟರೂ ಈಗ ಕನ್ನಡ ಭಾಷಿಗರಿಗೆ ಅವಮಾನ ಮಾಡುತ್ತಿದ್ದಾರೆ, ನಮ್ಮ ಕನ್ನಡಿಗರಿಗೆ ಮಾಡುವ ಅವಮಾನವನ್ನು ನಾವು ಸಹಿಸುವುದಿಲ್ಲ, ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಮತ್ತು ಕಸ್ತೂರಿ ಕನ್ನಡ ಸಂಘದ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪುನೀತ್‍ರಾಜ್ ಅಭಿಮಾನಿ ಬಳಗದಿಂದ ಅಪ್ಪು ಅವರ 5ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಿ ಮಾತನಾಡಿ, ನವೆಂಬರ್ ತಿಂಗಳು ಕನ್ನಡವಾಗದೆ ನಿತ್ಯೋತ್ಸವವಾಗಬೇಕು. ನಮ್ಮ ಕನ್ನಡ ಭಾಷೆ ಬಗ್ಗೆ ಹೋರಾಟ ನಡೆಸುವುದು ನಮ್ಮ ಹಕ್ಕಾಗಿದೆ. ಕನ್ನಡಕ್ಕೆ ಕೈ ಎತ್ತಿ ಎಂಬ ನಾಣ್ಣುಡಿಯಂತೆ, ಕನ್ನಡನಾಡಿನಲ್ಲಿ ನಾವುಗಳೆಲ್ಲರೂ ಕನ್ನಡಿಗರಾಗಬೇಕು. ಕನ್ನಡನಾಡಿನಲ್ಲಿ ಜಾಗ ಪಡೆದು ಉದ್ಯೋಗ ಸೃಷ್ಟಿಯಲ್ಲಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆಂಬ ಬಗ್ಗೆ ತೀವ್ರವಾಗಿ ಖಂಡಿಸಿ, ನಮ್ಮ ನೆಲ-ಜಲ ತಗೆದುಕೊಂಡು ಕರ್ನಾಟಕದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಮೊದಲ ಅಧ್ಯತೆ ನೀಡವಂತಾಗಲಿ ಎಂದು ಹೇಳಿದರು.

ಕೊಟ್ಟ ಮಾತು ಈಡೇರದಿದ್ದರೆ ರಿಪ್ಪನ್‍ಪೇಟೆಗೆ ಕಾಲಿಡುವುದಿಲ್ಲ: ಈಗಾಗಲೇ ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಪೂರೈಸಲಾಗಿದ್ದು, ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮೇಲ್ದೆರ್ಜೆಗೆ ಏರಿಸುವ ಬಗ್ಗೆ ಸರ್ಕಾರದ ಗಮನ ಸೆಳದಿರುತ್ತೇನೆ. ಅಲ್ಲದೆ ಇಲ್ಲಿನ ವಿನಾಯಕ ವೃತ್ತದ ಅಗಲೀಕರಣ ಮತ್ತು ತಂಗುದಾಣ ಕಾಮಗಾರಿ ಸೇರಿದಂತೆ ಇತರ ಅಭಿವೃದ್ಧಿ ಬಗ್ಗೆ ಕೊಟ್ಟ ಭರವಸೆಯಂತೆ ಪೂರ್ಣಗೊಳಿಸದಿದ್ದರೆ ರಿಪ್ಪನ್‍ಪೇಟೆಗೆ ಕಾಲಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿದರು.

ಕಸ್ತೂರಿ ಕನ್ನಡ ಸಂಘದ ಆಧ್ಯಕ್ಷ ಕೆರೆಹಳ್ಳಿ ಕೆ.ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಆರ್.ಎ.ಚಾಬುಸಾಬ್, ಜೆಡಿಎಸ್ ಆಧ್ಯಕ್ಷ ಎನ್.ವರ್ತೇಶ್, ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್, ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷೆ ಆರ್.ಡಿ.ಶೀಲಾ, ಡಿ.ಈ.ಮಧುಸೂದನ್, ಆರ್.ಎಂ.ನಿರಂಜನ್, ಅಶೀಫ್ ಭಾಷಾ, ಹಸನಬ್ಬ, ಶ್ರೀಧರ, ರವೀಂದ್ರ ಕೆರೆಹಳ್ಳಿ, ಅರ್.ಎಚ್.ಶ್ರೀನಿವಾಸ್ ಅಚಾರ್, ನರಸಿಂಹ ಇನ್ನಿತರರು ಪಾಲ್ಗೊಂಡಿದ್ದರು.

ಭುವನೇಶ್ವರಿ ತಾಯಿ ಮೆರವಣಿಗೆ: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘ ಮತ್ತು ಪುನೀತ್‍ರಾಜ್ ಅಭಿಮಾನಿ ಬಳಗದ ಅಶ್ರಯದಲ್ಲಿ ಭುವನೇಶ್ವರಿ ತಾಯಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಸ್ಥಳೀಯ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜುರೆಡ್ಡಿ ಕನ್ನಡ ಬಾವುಟವನ್ನು ಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿದರು.

ಮೆರವಣಿಗೆಯು ಹೊಸನಗರ ರಸ್ತೆಯಲ್ಲಿನ ಜಿ.ಎಸ್.ಬಿ.ಸಮಾಜದಿಂದ ಹೊರಟು ಸಾಗರ-ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಸಂಚರಿಸಿ ಜನಾರ್ಕಷಣೆಗೊಳಿಸಿತು.

ಭುವನೇಶ್ವರಿ ದೇವಿ ಮೆರವಣಿಗೆಯಲ್ಲಿ ಡೊಳ್ಳು, ಕೋಲಾಟ, ಚಂಡೆ, ಪುಟಾಣಿ ಮಕ್ಕಳ ವೇಷ ಭೂಷಣದ(ಛದ್ಮವೇಷ) ಜಾನಪದ ಕಲಾತಂಡಗಳ ಕಲಾಪ್ರದರ್ಶನ ಮೆರವಣಿಗೆಗೆ ಮೆರಗು ತಂದಿತು.

ಡೊಳ್ಳು ಕೋಲಾಟಕ್ಕೆ ಹೆಜ್ಜೆ ಹಾಕಿದ ಶಾಸಕ: 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭವ್ಯ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಡೊಳ್ಳಿನ ಕೋಲಾಟದ ತಂಡದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೆಜ್ಜೆ ಹಾಕುವ ಮೂಲಕ ಕುಣಿದು ಕಲಾ ತಂಡದವರನ್ನು ಪ್ರೋತ್ಸಾಹಿಸಿದ ದೃಶ್ಯ ಸಾರ್ವಜನಿಕರನ್ನು ಸೆಳೆಯಿತು.