ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಿಗರೇ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿಯ ಮನೋಭಾವ ಹೊಂದಿದ್ದಾರೆ. ಯಾವ ಬಗೆಯಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕಿತ್ತೋ ಆ ರೀತಿಯಲ್ಲಿ ಕನ್ನಡಿಗರು ತೊಡಗಿಸಿಕೊಂಡಿಲ್ಲ. ನಮ್ಮ ಈ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಕನ್ನಡೇತರರು ಕನ್ನಡ ನಾಡಿನಲ್ಲಿ ಯಜಮಾನ್ಯ ಸ್ಥಾಪಿಸಲು ಹೊರಟಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಎಲ್.ಎನ್.ಮುಕುಂದರಾಜ್ ಎಂದು ಹೇಳಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಶಿಬಿರದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರು ಉದಾರಿಗಳು ಜೊತೆಗೆ ಉದಾಸೀನ ವ್ಯಕ್ತಿಗಳು. ಹೊರ ರಾಜ್ಯಗಳಿಂದ ಹೊರ ದೇಶಗಳಿಂದ ಕನ್ನಡ ನಾಡಿಗೆ ಬಂದಂತಹ ಜನರಿಗೆ ಕನ್ನಡ ಬಗ್ಗೆ ವಿಶೇಷ ಒಲವಿದೆ. ಆದರೆ ಕನ್ನಡಿಗರೇ ಕನ್ನಡದ ಬಗ್ಗೆ ನಿರಾಸಕ್ತಿಯ ಮನಸ್ಸು ಇದೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಕನ್ನಡದ ಭವ್ಯ ಪರಂಪರೆಗೆ ಉತ್ತರಾಧಿಕಾರಿಗಳನ್ನು ನಿರ್ಮಿಸಬೇಕಾಗಿದೆ. ಬೆಂಗಳೂರು ವಿಭಜನೆಯಾಗಿ ಪಾಲಿಕೆಗೆ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಬೆಂಗಳೂರು ನಗರದಲ್ಲಿ ಸಾವಿರಾರು ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನವಿದೆ. ಆದರೆ ಅದನ್ನು ನಮ್ಮ ಭಾಷೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ವಿಫಲರಾಗಿದ್ದೇವೆ. ಕನ್ನಡಕ್ಕೆ ಇನ್ನೂ ಸರಿಯಾದ ಫಾಂಟ್ ದೊರೆಯುತ್ತಿಲ್ಲ. ಪಿಡಿಎಫ್ ದಾಖಲೆಯನ್ನು ವರ್ಲ್ಡ್ ಫೈಲ್ ಗೆ ಬದಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ 16 ವಿಶ್ವವಿದ್ಯಾಲಯಗಳಲ್ಲಿ ತಮಿಳು ಭಾಷೆಯನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. ಆದರೆ ಕನ್ನಡ ಭಾಷಾ ಅಧ್ಯಯನ ವಿಭಾಗ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳಾದರೂ ಅದಿನ್ನೂ ರಾಜ್ಯ ಸರ್ಕಾರದ ಅಡಿಯಲ್ಲಿ ಬಂದಿಲ್ಲ. ದೇಶದಲ್ಲಿರುವ ಹಲವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತಮಿಳು ಭಾಷೆಯನ್ನು ಕಲಿಸಲಾಗುತ್ತದೆ. ಆದರೆ ಕನ್ನಡ ಅಧ್ಯಯನ ಪೀಠ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಅಬ್ದುಲ್ ರೆಹಮಾನ್ ಪಾಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ತಿಮ್ಮೇಶ್ ಮತ್ತು ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.