ಸಾರಾಂಶ
ನದಿಗಳು ಹರಿಯುವ, ಸಾಧು-ಸಂತರು-ದಾಸರು- ಶಿವಶರಣರು- ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ
ಕನ್ನಡಪ್ರಭ ವಾರ್ತೆ ಜಮಖಂಡಿ
ಬೇರೆ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ನಶಿಸಿ ಹೋಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ದಿನದಿಂದ ದಿನಕ್ಕೆ ಕಳೆದು ಹೋಗುತ್ತಿದೆ. ಕನ್ನಡಿಗರು ಈಗಲೇ ಎಚ್ಚೆತ್ತು ಕನ್ನಡ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.ನಗರದ ತುಂಗಳ ಪದವಿ ಪೂರ್ವ ಕಾಲೇಜು ಹಾಗೂ ತುಂಗಳ ಪ್ರೌಢ ಶಾಲೆಯಲ್ಲಿ ಮಕ್ಕಳಿಗಾಗಿ ನಡೆದ ಸಾಹಿತ್ಯ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯುತ್ತೇವೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ. ನದಿಗಳು ಹರಿಯುವ, ಸಾಧು-ಸಂತರು-ದಾಸರು- ಶಿವಶರಣರು- ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ ಎಂದರು.
ತುಂಗಳ ಸಂಸ್ಥೆ ಸಹ ವ್ಯವಸ್ಥಾಪಕಿ ಟ್ರಸ್ಟಿ ಡಾ.ಲಕ್ಷ್ಮೀ ತುಂಗಳ ಮಾತನಾಡಿ, ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಲು ಪಾಲಕರು ಪ್ರೇರೆಪಿಸಬೇಕು. ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯಬೇಕು. ಕನ್ನಡದ ಶ್ರೀಮಂತ ಸಾಹಿತ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಸಾಹಿತ್ಯ ಓದಬೇಕು. ಅದು ನಮ್ಮ ಬದುಕನ್ನು ತಿದ್ದಿ-ತೀಡಿ ಸದೃಢಗೊಳಿಸುತ್ತದೆ. ನಮ್ಮ ಸಂಸ್ಕೃತಿಗೆ ಅನಾದಿಕಾಲದ ಇತಿಹಾಸವಿದೆ. ನಾವು ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿಯನ್ನು, ಸಾಂಪ್ರದಾಯವನ್ನು ಮರೆಯಬಾರದು. ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕು ಹಾಗೂ ಭಾಷೆಯ ಬಗ್ಗೆ ನಮಗೆ ಗೌರವವಿರಬೇಕು ಎಂದರು.ಸಂಗೀತ ನಿರ್ದೇಶಕ ಉಪಾಸನಾ ಮೋಹನ ಹಾಗೂ ಗಾಯಕ ಪಂಚಮ ಹಳಿಬಂಡಿ ವಿದ್ಯಾರ್ಥಿಗಳಿಗೆ ಭಾವಗೀತೆ ತರಬೇತಿ ನೀಡಿ ಸಂಗೀತ ಸಂಜೆ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಅಶೋಕ ತುಂಗಳ, ಮುಖ್ಯೋಪಾಧ್ಯಾಯ ಡಿ. ಜಿ ವಾಲಿ ಹಾಗೂ ಶಿಕ್ಷಕರು. ಸಿಬ್ಬಂದಿ ಇದ್ದರು.