ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಕಾಂತರಾಜ್ ವರದಿ ಅನ್ವಯ ಜಾತಿ ಜನಗಣತಿಯನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಜಾರಿಗೊಳಿಸಬೇಕು ಹಾಗೂ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ನ.7ರಂದು ಹಿಂದುಳಿದ ವರ್ಗಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಹೇಳಿದರು.ಪಟ್ಟಣದ ಸುದ್ದಿಮನೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖಂಡ ತೀ.ನ.ಶ್ರೀನಿವಾಸ್, ರಾಚಪ್ಪ ಸಹಿತ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ ಪ್ರತಿಯೊಂದು ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಜಾತಿ ಜನಗಣತಿಗೆ ಇದೀಗ ದೇಶಾದ್ಯಂತ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ದಿಸೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಜಾತಿ ಜನಗಣತಿಯನ್ನು ಅಂಗೀಕರಿಸಿ ಜಾರಿಗೊಳಿಸುವ ಎಲ್ಲ ಸಿದ್ಧತೆಯಲ್ಲಿದೆ ಎಂದು ತಿಳಿಸಿದರು.ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಆಶಯದಂತೆ ಮೀಸಲಾತಿ ಸೌಲಭ್ಯವನ್ನು ಇತರೆ ಹಿಂದುಳಿದ ಸಮುದಾಯ ಪಡೆಯಬೇಕು. ಈ ದಿಸೆಯಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಬಗ್ಗೆ ಅಧ್ಯಯನಕ್ಕೆ ಸಿದ್ದರಾಮಯ್ಯ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕಾಂತರಾಜ್ ಆಯೋಗ ನೇಮಿಸಿ, ಸೂಕ್ತ ಅನುದಾನ ಸೌಲಭ್ಯ ನೀಡಿ, ಸಮೀಕ್ಷೆಗೆ ಚಾಲನೆ ನೀಡಲಾಯಿತು. ಅನಂತರದಲ್ಲಿನ ಬಿಜೆಪಿ ಸರ್ಕಾರ ಆಯೋಗದ ವರದಿಗೆ ಹೆಚ್ಚಿನ ಮಾನ್ಯತೆ ನೀಡದೇ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಪುನಃ ಸಿದ್ದರಾಮಯ್ಯ ಸಿಎಂ ಆಗಿದ್ದು, ಅವರ ಹಿತಾಸಕ್ತಿಯಿಂದಾಗಿ ಆಯೋಗ 52 ವಿವಿಧ ಅಂಶಗಳನ್ನು ಗುರುತಿಸಿ ಶಿಕ್ಷಕರ ಮೂಲಕ ಪ್ರತಿ ಕುಟುಂಬ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಸರ್ಕಾರ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಕೇಂದ್ರಕ್ಕೆ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟ ಸಮಿತಿ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿ, ಪ್ರತಿಭಟನೆಯಲ್ಲಿ ಹಿಂದುಳಿದ ಎಲ್ಲ ವರ್ಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಮುಖಂಡ ಹಬೀಬುಲ್ಲಾ, ಉಮೇಶ್ ಕೋಡಿಹಳ್ಳಿ, ಅಣ್ಣಪ್ಪ ಹುಣಸೇಕಟ್ಟೆ, ಸಿರಿಯಣ್ಣಾರ ರೇವಣಸಿದ್ದಪ್ಪ, ಕರಿಬಸಪ್ಪ, ಎಸ್.ಗಿಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.
- - -ಬಾಕ್ಸ್ ಹಿಂದುಳಿದ ವರ್ಗ ಸಾಮಾಜಿಕ ನ್ಯಾಯದಿಂದ ವಂಚಿತ 1931ರಲ್ಲಿ ಮಾತ್ರ ದೇಶದಲ್ಲಿ ಜಾತಿ ಜನಗಣತಿ ನಡೆದಿದ್ದು, ನಂತರದಲ್ಲಿ ಹಲವು ಪರ-ವಿರೋಧ ನಿಲುವಿನಿಂದ ಜಾತಿ ಜನಗಣತಿಗೆ ದೊರೆಯಬೇಕಾದ ಮಾನ್ಯತೆ ದೊರೆಯದೇ ಹಿಂದುಳಿದ ವರ್ಗ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ ಎಂದು ನಗರದ ಮಹಾದೇವಪ್ಪ ಹೇಳಿದರು.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೇ.60 ಮೀಸಲಾತಿ ಘೋಷಿಸಿದ್ದು, ಜನಸಂಖ್ಯೆಯ ಆಧಾರದಲ್ಲಿ ಜನಗಣತಿಯಾಗದೇ ಹಿನ್ನಡೆಯಾಗಿದೆ. ನಂತರದಲ್ಲಿ ಚಿನ್ನಪ್ಪ ಸಮಿತಿ ವರದಿಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ವೀರಪ್ಪ ಮೊಯ್ಲಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಜಾತಿ ಆಧಾರಿತ ರಾಜಕೀಯ ಮೀಸಲಾತಿ ದೊರೆತು ಗ್ರಾಪಂ., ತಾ.ಪಂ., ಜಿ.ಪಂ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.27 ಮೀಸಲಾತಿ ಲಭ್ಯವಾಗಿದೆ. ಇದರ ಪ್ರಯೋಜನವನ್ನು 3 ಬಿ ಅಡಿ ಲಿಂಗಾಯಿತರು, 1ಎ ಅಡಿ ಗಂಗಾಮತಸ್ಥರ ಸಹಿತ ಹಲವು ಸಮುದಾಯ ಪಡೆದಿದೆ ಎಂದು ತಿಳಿಸಿದರು.- - - -4ಕೆಎಸ್‌ಕೆಪಿ3.ಜೆಪಿಜಿ: ಪತ್ರಿಕಾಗೋಷ್ಠಿಯಲ್ಲಿ ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿದರು.