ಕಾಂತಾವರ ಕನ್ನಡ ಸಂಘ ಮುದ್ದಣ ಸಾಹಿತ್ಯೋತ್ಸವ

| Published : Mar 25 2024, 12:54 AM IST

ಸಾರಾಂಶ

ಪತ್ರಕರ್ತ ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರ ‘ನುಡಿತೇರು’ವನ್ನು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಾಹಿತ್ಯದಲ್ಲಿ ಸಾಧನೆ ಎನ್ನುವುದಿಲ್ಲ. ಅದೇನಿದ್ದರೂ ಉಪಾಸನೆಯ ಪವಿತ್ರ ಕಾರ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಪ್ರಶಸ್ತಿಗೂ ತನ್ನದೇ ಆದ ಘನತೆಯಿರುತ್ತದೆ ಎಂದು ಬೆಂಗಳೂರಿನ ಕವಿ ಡಾ.ಲಕ್ಷ್ಮಣ. ವಿ.ಎ.ಹೇಳಿದ್ದಾರೆ. ಕಾಂತಾವರ ಕನ್ನಡ ಸಂಘದ ವತಿಯಿಂದ ಭಾನುವಾರ ಕಾಂತಾವರ ಕನ್ನಡ ಭವನದಲ್ಲಿ ಜರಗಿದ ಮುದ್ದಣ ಸಾಹಿತೋತ್ಸವದಲ್ಲಿ 2023ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಯಿನ್ ಬೂತ್ ಲಕ್ಷ್ಮಣ ವಿ. ಎ ಅವರ ಪ್ರಶಸ್ತಿ ಪುರಸ್ಕೃತ ಕೃತಿ ‘ಕಾಯಿನ್ ಬೂತ್’ನ್ನು ಬಿಡುಗಡೆ ಮಾಡಲಾಯಿತು. 2024 ರ ಸಾಲಿನ ದತ್ತಿನಿಧಿ ಪುರಸ್ಜಾರದಲ್ಲಿ ಮುನಿರಾಜ ರೆಂಜಾಳ ಅವರಿಗೆ ಗಮಕ ಕಲಾ ಪ್ರವಚನ ಪ್ರಶಸ್ತಿ, ಗಮಕಿ ಸುರೇಶ್ ರಾವ್ ಅತ್ತೂರು ಅವರಿಗೆ ಗಮಕ ಕಲಾ ವಾಚನ ಪ್ರಶಸ್ತಿ ಮತ್ತು ಕಾರ್ಕಳದ ಲೋಹ ಶಿಲ್ಪಿ ಪ್ರಕಾಶ್ ಆಚಾರ್ಯ ಅವರಿಗೆ ಶಿಲ್ಪಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ್ ರಾಜ್, ಅವರು ಮಾತನಾಡಿ, ಕಾಂತಾವರ ಕನ್ನಡ ಸಂಘವು 50 ರ ಅಂಚಿಗೆ ತಲುಪುತ್ತಿದ್ದರೆ, ಶಿವಮೊಗ್ಗ ಕರ್ನಾಟಕ ಸಂಘವು ಶತಮಾನದಂಚಿಗೆ ಕಾಲಿಡುತ್ತಿದೆ ಎಂದರು. ನುಡಿತೇರು: ಪತ್ರಕರ್ತ ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರ ‘ನುಡಿತೇರು’ವನ್ನು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಬಿಡುಗಡೆಗೊಳಿಸಿದರು.ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ 7 ಹೊತ್ತಗೆಗಳನ್ನು ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಬಿಡುಗಡೆಗೊಳಿಸಿದರು. ಗ್ರಂಥಮಾಲೆಯಲ್ಲಿ ಅನಾವರಣಗೊಂಡ ಸಾಧಕರಾದ ಸಾಹಿತ್ಯ ಭಂಡಾರದ ಪರವಾಗಿ (ಎಂ.ಎ.ಸುಬ್ರಹ್ಮಣ್ಯ ಮತ್ತು ಅರುಣ), ಡಾ.ವಾರಿಜಾ ನೀರಬೈಲು, ಕೆ.ಎ.ರೋಹಿಣಿ, ಕೆ.ಹೆಚ್.ವಿಜಯಕುಮಾರ್, ಮುದ್ರಣ ವಿನ್ಯಾಸಕಾರ ಕಲ್ಲೂರು ನಾಗೇಶ್ ಅವರನ್ನು ಗೌರವಿಸಲಾಯಿತು. ಕೃತಿಕಾರರಾದ ಸುಮತಿ ನಿರಂಜನ, ವಿಜಯ ಬಿ.ಶೆಟ್ಟಿ., ಶ್ರೀಪತಿ ಮಂಜನಬೈಲು, ಡಾ.ಮೀನಾಕ್ಷಿ ರಾಮಚಂದ್ರ, ಅಂಶುಮಾಲಿ, ಡಾ.ಸರ್ವಮಂಗಳ ಪಿ.ಆರ್ ಹಾಗೂ ಡಾ.ಸುಲತಾ ವಿದ್ಯಾಧರ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರಾಯೋಜಕರನ್ನು ಗೌರವಿಸಲಾಯಿತು.

ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಠಲ ಬೇಲಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ, ಸತೀಶ್ ಕುಮಾರ್ ಕೆಮ್ಮಣ್ಣು ಕಾರ್ಯಕ್ರಮ ನಿರ್ವಹಿಸಿದರು.