ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜಾಗತೀಕರಣದ ಪ್ರಭಾವದಿಂದಾಗಿ ಯುವಜನರ ಓದಿನ ಆಯ್ಕೆ ರೀತಿ ಬದಲಾಗಿದೆ. ಏನು ಕೂಡಾ ಬರೆಯಬಹುದೆನ್ನುವ ಸ್ಥಿತಿಗೆ ತಲುಪಿರುವ ಈ ಸಂಕೀರ್ಣ ಸಂದರ್ಭದಲ್ಲಿ ಕನ್ನಡ ಕಟ್ಟಿ ಬೆಳೆಸುವ ಹೊಣೆಗಾರಿಕೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಸವಾಲು ನಮ್ಮ ಮುಂದಿದೆ ಎಂದು ಉಡುಪಿ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ಅಭಿಪ್ರಾಯಪಟ್ಟಿದ್ದಾರೆ.ಭಾನುವಾರ ಕಾಂತಾವರದಲ್ಲಿ ನಡೆದ ಕಾಂತಾವರ ಕನ್ನಡ ಸಂಘದ ಮುದ್ದಣ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಕೆಲಸವನ್ನು ಮಾಡುವ ಸಂಘವನ್ನು ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು.
ಕಲಬುರ್ಗಿಯ ಕಾವ್ಯಶ್ರೀ ಮಹಾಗಾಂವಕರ್ ಹಾಗೂ ಉಡುಪಿಯ ಪೂರ್ಣಿಮಾ ಸುರೇಶ್ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಹಾಗೂ ಮಂಗಳೂರಿನ ಸರ್ಪಂಗಳ ಈಶ್ವರ ಭಟ್ ಅವರಿಗೆ ಗಮಕ ಕಲಾ ಪ್ರವಚನ ಪ್ರಶಸ್ತಿ, ಯಜ್ಞೇಶ ಆಚಾರ್ಯ ಸುರತ್ಕಲ್ ಅವರಿಗೆ ಗಮಕ ಕಲಾ ವಾಚನ ಪ್ರಶಸ್ತಿ ಮತ್ತು ರಥಶಿಲ್ಪಿ ಶಂಕರ ಆಚಾರ್ಯ ಕೋಟೇಶ್ವರ ಅವರಿಗೆ ಕಾಷ್ಠ ಶಿಲ್ಪ ಕಲಾ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ನೆರವೇರಿಸಿದರು.ಐದೂ ಪ್ರಶಸ್ತಿಗಳು ತಲಾ ಹತ್ತು ಸಾವಿರ ರು. ಗೌರವ ಸಂಭಾವನೆ, ಮಾನಪತ್ರ ಹಾಗೂ ಸನ್ಮಾನವನ್ನೊಳಗೊಂಡಿದೆ.
ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಐದು ನೂತನ ಕೃತಿಗಳು ಮತ್ತು ಮುದ್ದಣ ಕಾವ್ಯ ಪ್ರಶಸ್ತಿ ಪಡೆದ ಎರಡು ಕೃತಿಗಳನ್ನು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಲೋಕಾರ್ಪಣೆಗೊಳಿಸಿದರು.ಉಡುಪಿಯ ಹಿರಿಯ ಜಾನಪದ ಗಾಯಕ ಶಂಕರದಾಸ್ ಚೆಂಡ್ಕಳ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನೆರವೇರಿತು. ಸದಾನಂದ ನಾರಾವಿ ನಿರೂಪಿಸಿದರು.
ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಲೋಕಾರ್ಪಣೆಗೊಂಡ ಕೃತಿಗಳು ಮತ್ತು ಲೇಖಕರು:ಶಿಕ್ಷಣ ತಜ್ಞ ಶ್ರೀ ಎಸ್.ಜಿ. ಕೃಷ್ಣ (ಲೇ: ಡಾ. ಜಿ.ಎಸ್.ಹೆಗ್ಡೆ, ಹಡಿನಬಾಳ), ಭರತನಾಟ್ಯ ವಿದುಷಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ (ಲೇ : ಶ್ರಿಮತಿ ಕೋಡಿಬೆಟ್ಟು ರಾಜಲಕ್ಷ್ಮೀ), ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ (ಲೇ : ಕೆ. ರಾಧಾಕೃಷ್ಣ ಉಳಿಯತ್ತಡ್ಕ), ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು (ಲೇ : ಡಾ. ದುಗ್ಗಪ್ಪ ಕಜೆ), ಪ್ರಸಿದ್ಧ ಲೇಖಕಿ ಡಾ. ಪ್ರಮೀಳಾ ಮಾಧವ ಚೇವಾರು, ಕಾಸರಗೋಡು (ಲೇ : ಡಾ. ಮೀನಾಕ್ಷಿ ರಾಮಚಂದ್ರ).