ಸಿ.ಕೆ. ನಾಗರಾಜ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲೂ ಇನ್ನು ಮುಂದೆ ಚಲನಚಿತ್ರ ಇನ್ನಿತರ ಚಿತ್ರೀಕರಣ ಚಟುವಟಿಕೆ ನಿರಂತರವಾಗಿ ನಡೆಯಲು ಒಂದು ಮಹತ್ವದ ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ. ಸುಮಾರು 25 ಎಕರೆ ಪ್ರದೇಶದಲ್ಲಿ ಭವ್ಯವಾದ ಕಂಠೀರವ ಸ್ಟುಡಿಯೋಸ್ ಇನ್ನೊಂದು ಘಟಕ ಮರಿಯಮ್ಮನಹಳ್ಳಿಯ ಪಕ್ಕದಲ್ಲಿ ಡಣಾಯಕನಕೆರೆ ಗ್ರಾಮದ ಸಮೀಪದಲ್ಲಿ ತಲೆ ಎತ್ತಲಿದೆ.ಈಗ ಚಲನಚಿತ್ರ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಹೋಗಬೇಕಿದೆ. ಅಧಿಕ ವೆಚ್ಚವಾಗುತ್ತಿದೆ. ಕೆಲವು ನಿರ್ದೇಶಕರು ಖರ್ಚು-ವೆಚ್ಚದ ಲೆಕ್ಕಾಚಾರ ಹಾಕುತ್ತಿದ್ದಾರೆ. ಜತೆಗೆ ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ಉಂಟುಮಾಡುತ್ತಿದೆ. ಹೀಗಾಗಿ ರಾಜ್ಯದ ಎರಡು ಕಡೆ ಸ್ಟುಡಿಯೋ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.
ಚಿತ್ರೀಕರಣಕ್ಕೆ ಅನುಕೂಲವಾಗುವಂತಹ ಎರಡು ಪ್ರದೇಶದಲ್ಲಿ ಕನಿಷ್ಠ 25 ಎಕರೆ ಜಮೀನು ನೀಡುವಂತೆ ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಮರಿಯಮ್ಮನಹಳ್ಳಿ ಸಮೀಪದ ಡಣಾಯನಕೆರೆ ಸಮೀಪದಲ್ಲಿ ಸರ್ಕಾರದ 25 ಎಕರೆ ಜಮೀನು ಗುರುತಿಸಲಾಗಿದೆ.ಚಿತ್ರೀಕರಣ ಸೌಲಭ್ಯ ಬೇರೆ ಜಿಲ್ಲೆಗಳಿಗೂ ವಿಸ್ತರಿಸುವುದರಿಂದ ಆ ಭಾಗದ ಕಲೆ, ಸಂಸ್ಕೃತಿ, ಕಲಾವಿದರಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮರಿಯಮ್ಮನಹಳ್ಳಿ ಸೂಕ್ತ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಕಲಾವಿದರು ಹೆಚ್ಚಿದ್ದಾರೆ. ಅವರಿಗೂ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ದೊರೆಯಲಿದೆ.
ಈಗ ಗುರುತಿಸಿರುವ ಸ್ಥಳ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಹೊರಾಂಗಣ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಚಿತ್ರದುರ್ಗ ಇನ್ನಿತರ ಐತಿಹಾಸಿಕ ತಾಣಗಳ ಸಮೀಪದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮಂಡಳಿ ಮನವಿ ಮಾಡಿತ್ತು.
ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪನೆಯಾಗುವ ಸ್ಟುಡಿಯೋದಲ್ಲಿ ಚಿತ್ರೀಕರಣ, ರೆಕಾರ್ಡಿಂಗ್ ಮತ್ತು ಲ್ಯಾಬ್ ಡೆವಲಪ್‌ಮೆಂಟ್‌ನಂತಹ ಆಧುನಿಕ ತಂತ್ರಜ್ಞಾನದ ಸೌಲಭ್ಯ ಕಲ್ಪಿಸಲಾಗುವುದು. ಚಿತ್ರದ ಸಂಪೂರ್ಣ ಕೆಲಸಗಳು ಒಂದೇ ಸೂರಿನಡಿ ನಡೆಯಲು ಸಾಧ್ಯವಾಗುತ್ತದೆ. ಸ್ಥಳೀಯರಿಗೆ ಉದ್ಯೋಗವಕಾಶ ದೊರೆಯಲಿವೆ.
ಸರ್ಕಾರ ಜಮೀನು ಮುಂಜೂರಿ ಮಾಡಿದ ತಕ್ಷಣ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಎರಡು ವರ್ಷಗಳಲ್ಲಿ ವಿಜಯನಗರ ಜಿಲ್ಲೆಯಲ್ಲಿ ಕಂಠೀರವ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣಗಳು ನಡೆಯಲಿವೆ. ವಿಜಯನಗರ ಜಿಲ್ಲೆ ಕಲಾವಿದರ ತವರೂರು ಎನ್ನುವ ಹೆಗ್ಗಳಿಕೆ ಹೊಂದಿದ್ದು, ಈಗ ಮತ್ತೊಂದು ಹೆಮ್ಮೆಯ ಗರಿ ಮೂಡಿದಂತಾಗುತ್ತದೆ.ವಿಜಯನಗರ ಶಿವಮೊಗ್ಗದಲ್ಲಿ ಸ್ಟುಡಿಯೋ: ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ನೆನಪಿಗಾಗಿ ಈ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕ ಪ್ರದೇಶವಾದ ವಿಜಯನಗರ ಜಿಲ್ಲೆ ಮತ್ತು ಮಲೆನಾಡು ಪ್ರದೇಶವಾದ ಶಿವಮೊಗ್ಗ ಪ್ರದೇಶದಲ್ಲಿ ಕಂಠೀರವ ಸ್ಟುಡಿಯೋಸ್ ನಿರ್ಮಾಣಕ್ಕೆ ಮುಂದಾಗಿದೆ ಎಂದು ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೊಹಬೂಬ್ ಪಾಷಾ ಹೇಳಿದರು.