ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕಪ್ಪತ್ತಗುಡ್ಡ

| Published : Aug 07 2024, 01:03 AM IST

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕಪ್ಪತ್ತಗುಡ್ಡ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆ ನಿರಂತರ ಯತ್ನದಿಂದ ಸಾವಿರಾರು ಮರಗಳನ್ನು ನೆಟ್ಟಿದ್ದು ಅವು ಚಿಗುರೊಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

ಮಳೆಗೆ ಹಸಿರಿನ ತೋರಣವಾದ ಕಪ್ಪತ್ತಗುಡ್ಡ ಪ್ರದೇಶ

ರಿಯಾಜಅಹ್ಮದ ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಪ್ರಸಕ್ತ ಸಾಲಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪ್ಪತ್ತಗುಡ್ಡದ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರಿಗೆ, ಪರಿಸರ ಪ್ರಿಯರಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿದೆ. ಅರಣ್ಯ ಇಲಾಖೆ ನಿರಂತರ ಯತ್ನದಿಂದ ಸಾವಿರಾರು ಮರಗಳನ್ನು ನೆಟ್ಟಿದ್ದು ಅವು ಚಿಗುರೊಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಗುಡ್ಡ ಹತ್ತಿದ ನಂತರ ಮೊದಲು ಸಿಗುವುದು ಗಾಳಿಗುಂಡಿ ಬಸವಣ್ಣ ದೇವಾಲಯ. ಇಲ್ಲಿ ಬಹಳ ಜೋರಾಗಿ ಗಾಳಿ ಬೀಸುತ್ತದೆ. ಬಹಳ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಗಾಳಿ ವಿದ್ಯುತ್‌ ಯಂತ್ರ ಅಳವಡಿಕೆಗೆ ಕಿರಿದಾದ ರಸ್ತೆ ನಿರ್ಮಿಸಿದ್ದರಿಂದ ನಿಧಾನಗತಿಯಲ್ಲಿ ಸಾಗಬೇಕಾಗುತ್ತದೆ. ಕಡಿದಾದ ಕಂದಕಗಳೂ ಇರುವುದರಿಂದ ಜಾಗೃತೆ ಅಗತ್ಯ.

ಇಲ್ಲಿಯ ಗಾಳಿ ವಿದ್ಯುತ್‌ ಯಂತ್ರಗಳು ಅತ್ಯಂತ ವೇಗವಾಗಿ ಚಲಿಸಿ ವಿದ್ಯುತ್‌ ಉತ್ಪಾದಿಸುತ್ತವೆ. ಅದನ್ನು ನೋಡುವುದೇ ಹಬ್ಬ. ಬೆಟ್ಟದ ಮೇಲಿನಿಂದ ನೋಡಿದರೆ ಹಸಿರು ಹೊದ್ದ ಪರ್ವತ ಶ್ರೇಣಿ ಎಂತವರನ್ನೂ ಬೆರಗಾಗಿಸುತ್ತದೆ.

ಸಸ್ಯ ಕಾಶಿಯಲ್ಲಿ ಬೃಹಂಗೇಶ್ವರ:

ಕಪತಗುಡ್ಡದ ಕಪತ್‌ಮಲೇಶ್ವರ ದೇವಸ್ಥಾನ ಭಕ್ತರಿಗೆ ಆರಾಧ್ಯ ದೈವ. ಬೃಹಂಗೇಶ್ವರ ಎಂದರೆ ಶಿವನ ಆರಾಧಕ ಶಿವನಿಂದ ಆಶೀರ್ವಾದಕ್ಕೆ ಭಾಜನನಾಗಿ ಶಿವನ ಆಧೀನದಲ್ಲಿದ್ದು ವಾಮಾಚಾರಕ್ಕೆ ಒಳಗಾದವರನ್ನು ಸಂರಕ್ಷಿಸಿ ಪಾಪದ ನಾಶ ಮಾಡಿ ಸದ್ಗತಿಯಲ್ಲಿ ನಡೆಯುವಂತೆ ಮಾಡುವ ಶಕ್ತಿ ಬೃಹಂಗೇಶ್ವರನಲ್ಲಿ ಅಡಗಿರುವುದು ಪ್ರತೀತಿ. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ವನ್ಯ ಪ್ರಾಣಿಗಳ ತಾಣ:

ಕಪ್ಪತಗುಡ್ಡ ಬೃಹತ್‌ ಆಯುರ್ವೇದೀಯ ಹಾಗೂ ಗಿಡಿಮೂಲಿಕೆಗಳ ತಾಣ. ಇಲ್ಲಿಯ ಯಾವುದೇ ಸೊಪ್ಪು, ಮೂಲಿಕೆ ಮುಟ್ಟಿದರೂ ಅದೊಂದು ಔಷಧೀಯ ಗುಣ ಹೊಂದಿದೆ ಎಂಬ ಪ್ರತೀತಿ ಇದೆ. ಇಲ್ಲಿ ಬಹು ವಿಧದ ಸಸ್ಯ ವನಸ್ಪತಿಗಳಾದ ಕಾಮಕಸ್ತೂರಿ, ಹೊನ್ನಾವರಿ, ಮಧುನಾಶಿನಿ, ಗುಲಗಂಜಿ, ಅಡವಿಸೋಗಿ, ನಕರಿ, ಬಿಕ್ಕೆಹಣ್ಣು, ಕದಂಬಸೋನ್ನಕೆ, ಕಾಡಿಗರಗ, ಮದುಗುಣಕಿ, ಶಿಖಮಾಚಿಪತ್ರಿ ಇಂತಹ ಹಲವಾರು ಔಷಧ ಸಸ್ಯಗಳನ್ನು ಒಳಗೊಂಡಿದೆ. ಅಲ್ಲದೆ ಹಲವು ಕಾಡುಪ್ರಾಣಿಗಳ ಜೀವ ಸಂಕುಲಗಳ ಇರುವುದರಿಂದಾಗಿ ವನ್ಯಪ್ರಾಣಿಗಳ ತಾಣವಾಗಿದೆ.

ನಾಡು ಕಂಡ ಅಪರೂಪದ ಸಸ್ಯ ಕಾಶಿ ಕಪ್ಪತ್ತಗುಡ್ಡ ಉಳಿದರೆ ಮಾತ್ರ ಗದಗ ಜಿಲ್ಲೆಯಲ್ಲಿ ಉತ್ತಮ ಮಳೆ ಬೆಳೆ ಜನಜೀವನ ಸುರಕ್ಷಿತವಾಗಿರಲು ಸಾಧ್ಯ ಎನ್ನುವುದನ್ನು ಅರಿತು ಪರಿಸರದ ಉಳಿವಿನ ಹೋರಾಟಕ್ಕೆ ಮೆರುಗು ನೀಡಿದ ಮಹಾನ್ ಮಾನವತಾವಾದಿ ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಸೇರಿದಂತೆ ಹಲವು ಮಠಾಧೀಶರ, ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು, ಹಲವು ಹಂತದ ಹೋರಾಟಗಾರರ ಶ್ರಮದ ಪ್ರತೀಕವಾಗಿ ಸಂರಕ್ಷಿತ ಪ್ರದೇಶವಾಗಿ ಬೆಟ್ಟ ಉಳಿದುಕೊಂಡಿದೆ. ಇಂದು ಮಳೆಯಿಂದಾಗಿ ಹಚ್ಚು ಹಸಿರಿನ ತೋರಣದ ಪ್ರತೀಕವಾಗಿ ಎಲ್ಲ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಮಳೆಯಿಂದಾಗಿ ಇಂದು ಕಪ್ಪತ್ತಗುಡ್ಡ ಹಚ್ಚು ಹಸಿರಿನಿಂದ ಕೂಡಿದ್ದರಿಂದ ಸ್ವಚ್ಛತೆ ಹಾಗೂ ಕಪ್ಪತ್ತಗುಡ್ಡ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ದೇಶ ವಿದೇಶದ ಪ್ರವಾಸಿಗರು ದಿನ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪರಿಸರಪ್ರಿಯರಿಗೆ ಆನಂದದ ಛಾಯೆ ಮೂಡಿಸಿದೆ ಎಂದು

ಆ‌ರ್.ಎಫ್‌.ಒ ವಿರೇಂದ್ರ ಮರಿಬಸಣ್ಣವರ ತಿಳಿಸಿದ್ದಾರೆ.

ಕಪ್ಪತ್ತಗುಡ್ಡ ನಿರ್ಮಲ ಪರಿಸರದ ತಾಯಿಬೇರು ಉಳಿದರೆ ಪರಿಸರ ವೃಕ್ಷ ಉಳಿದೀತು. ಇಲ್ಲದೆ ಹೋದರೆ ಭವಿಷ್ಯತ್ತಿನ ಜನಾಂಗದ ಭವಿಷ್ಯ ಅಳಿದು ಹೋದೀತು. ಅದಕ್ಕಾಗಿ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕಾಗಿದೆ. ನಾವೆಲ್ಲರೂ ಎಚ್ಚೆತ್ತು ಪರಿಸರಕ್ಕೆ ಆದ್ಯತೆ ನೀಡಬೇಕು ಎಂದು ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದ್ದಾರೆ.