ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಾರ್ವಜನಿಕರಿಗೆ ನಿರಂತರ ಉಪಟಳ ನೀಡುತ್ತಿದ್ದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದ್ದು ಕಾಡಾನೆ ಸೆರೆಯಿಂದ ಸಾರ್ವಜನಿಕರು ತಾತ್ಕಾಲಿಕ ನಿಟ್ಟುಸಿರು ಬಿಟ್ಟಿದ್ದಾರೆ.ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಜನರಿಗೆ ನೀಡುತ್ತಿರುವ 3 ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ 2 ದಿನಗಳ ಹಿಂದಷ್ಟೆ ಚಾಲನೆ ನೀಡಿತ್ತು. ದುಬಾರೆ ಮತ್ತಿಗೋಡು ಶಿಬಿರದ 6 ಸಾಕಾನೆಗಳೊಂದಿಗೆ ಕಾರ್ಯಚರಣೆಗಿಳಿದ ಅರಣ್ಯ ಇಲಾಖೆ ಕರಡಿಗೋಡು ಚಕ್ಕನಳ್ಳಿ ಕಾಫಿತೋಟದಲ್ಲಿ 28 ವರ್ಷ ಪ್ರಾಯದ ಗಂಡಾನೆಯನ್ನು ಬುಧವಾರ ಸೆರೆ ಹಿಡಿದಿದ್ದಾರೆ.
ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ 2 ದಿನಗಳಿಂದ ಕಾರ್ಯಾಚರಣೆ ನಡೆಸಿ ಪುಂಡಾನೆಯನ್ನು ಸೆರೆ ಹಿಡಿದರು.ಬುಧವಾರ ಬೆಳಗ್ಗೆ ಮಾಲ್ದಾರೆ ಸಮೀಪದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಕಾಡಾನೆಯನ್ನು ಕಂಡರೂ, ಕಾಡಾನೆ ಅಲ್ಲಿಂದ ಬೇರೆ ಕಡೆಗೆ ತೆರಳಿತು. ನಂತರ ಚಿಕ್ಕನಳ್ಳಿಯ ಫಯಾಜ್ ಗೇಟ್ ಎಂಬಲ್ಲಿ ಅರಿವಳಿಕೆ ನೀಡಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿದ ನಂತರ ಎಚ್.ಡಿ. ಕೋಟೆಯ ಅಂತರ ಸಂತೆ ಅರಣ್ಯಕ್ಕೆ ಬಿಡಲಾಯಿತು
ಕಾಡಾನೆ ಸೆರೆಯಿಂದ ಈ ಭಾಗದ ಕಾರ್ಮಿಕರು, ಬೆಳೆಗಾರರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ಎಸಿಎಪ್ ಗೋಪಾಲ್, ಸಂಜೀತ್ ಸೋಮಯ್ಯ, ಶೂಟರ್ ಕನ್ನಂಡ ರಂಜನ್, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ.ಚೆಟ್ಟಿಯಪ್ಪ, ರಮೇಶ್, ಎಸಿಎಫ್ ನೆಹರು, ಆರ್‌ಎಫ್‌ಒ ದೇವಯ್ಯ, ಗಂಗಾಧರ್, ಡಿಆರ್‌ಎಫ್‌ಒ ಶ್ರೀನಿವಾಸ್, ಉಮಾಶಂಕರ್, ದೇವರಾಜ್, ರವಿಶಂಕರ್ ಸಹಿತ ಅಮ್ಮತ್ತಿ, ತಿತಿಮತಿಯ ಆರ್‌ಆರ್‌ಟಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.