ಕಾರಂಜಾ ಸಂತ್ರಸ್ತರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

| Published : Dec 13 2024, 12:48 AM IST

ಕಾರಂಜಾ ಸಂತ್ರಸ್ತರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

Karanja victim tried to commit suicide by consuming poison

-ನಾಲ್ಕೈದು ದಶಕಗಳ ಬೇಡಿಕೆಗೆ ಸಿಗದ ಸರ್ಕಾರದ ಸ್ಪಂದನೆ ನೇಣು ಬಿಗಿದುಕೊಂಡು ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

----

ಕನ್ನಡಪ್ರಭ ವಾರ್ತೆ, ಬೀದರ್‌

ಜಿಲ್ಲೆಯ ಕಾರಂಜಾ ಜಲಾಶಯದ ಹಿನ್ನೀರಿನ ಸಂತ್ರಸ್ತರು ಸರ್ಕಾರದ ಮುುಂದಿಟ್ಟಿದ್ದ ಬೇಡಿಕೆ ಈಡೇರಿಸಲು ನಿರ್ಲಕ್ಷವಹಿಸಿದ್ದನ್ನು ಖಂಡಿಸಿ ವಿಷ ಸೇವಿಸಲು ಯತ್ನಿಸಿ ಪ್ರತಿಭಟಿಸಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಚೇರಿ ಮುಂದೆ ಕಳೆದ ಸುಮಾರ 900 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸಿರುವ ಸಂತ್ರಸ್ತ ಹೋರಾಟಗಾರರು, ಜಲಾಶಯದಲ್ಲಿ ಮನೆ, ಮಠ ಹಾಗೂ ಭೂಮಿಯನ್ನು ಕಳೆದುಕೊಂಡಿದ್ದು, ವೈಜ್ಞಾನಿಕ ದರದ ಪರಿಹಾರವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ.

ಕಳೆದ ನಾಲ್ಕೈದು ದಶಕಗ ಹಿಂದೆ ಕಾರಂಜಾ ಜಲಾಶಯ ನಿರ್ಮಿಸಲಾಗಿದ್ದು ಅದರಿಂದ ಭೂಮಿ ಕಳೆದುಕೊಂಡ ರೈತರಿಗೆ ಆ ದಿನಗಳಲ್ಲಿ ಅತ್ಯಂತ ಕಡಿಮೆ ಪರಿಹಾರ ಮಂಜೂರು ಮಾಡಿದ್ದು ಅದನ್ನು ವೈಜ್ಞಾನಿಕ ಪರಿಹಾರಕ್ಕೆ ಮಂಜೂರಿಸಬೇಕು ಎಂದು ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವ ರೈತರು ಸತತ ಮೂರೆವರೆ ವರ್ಷಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಇದೀಗ ವಿಕೋಪಕ್ಕೆ ಹೋಗಿದೆ.

ನವೆಂಬರ್‌ ಅಂತ್ಯಕ್ಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿ 15 ದಿನಗಳಲ್ಲಿ ಪರಿಹಾರ ಘೋಷಿಸದೇ ಇದ್ದಲ್ಲಿ ನೇಣು ಬಿಗಿದುಕೊಂಡು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಎಚ್ಚರಿಸಿದ್ದರು. ಸರ್ಕಾರದ ವಿರುದ್ಧ ಧರಣಿ ಸತ್ಯಾಗ್ರಹ ಸ್ಥಳದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರ್‍ರ್ಯಾಲಿ ನಡೆಸಲು ಯತ್ನಿಸಿದರು. ಅದಕ್ಕೆ ಪೊಲೀಸರು ತಡೆಯೊಡ್ಡಿದರು. ರೇಕುಳಗಿ ಗ್ರಾಮದ ರೈತ ನಾಗಶೆಟ್ಟಿ (74) ಒಳ ಉಡುಪಿನಲ್ಲಿ ಇಟ್ಟುಕೊಂಡಿದ್ದ ವಿಷ ಸೇವನೆಗೆ ಮುಂದಾಗುತ್ತಲೇ ಪೊಲೀಸರು ಅದನ್ನು ಕಸಿದುಕೊಂಡರಾದರೂ ಅದರ ಕೆಲ ಹನಿಗಳು ಅವರ ಬಾಯಿಯಲ್ಲಿ ಹೋಗಿವೆ ಎಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆಯ ಸಂದರ್ಭಧಲ್ಲಿ ಪೊಲೀಸರು ಪ್ರತಿಯೊಬ್ಬರ ರೈತರನ್ನೂ ತಪಾಸಣೆ ಮಾಡಿದ್ದರಾದರೆ ಒಳ ಉಡುಪಿನಲ್ಲಿ ವಿಷದ ಬಾಟಲಿ ತಂದಿದ್ದು ಕಾಣದೇ ಇಂಥ ಅಚಾತುರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್‌ ಅವರು ಪ್ರತಿಭಟನೆ ವಿಕೋಪಕ್ಕೆ ಹೋಗದಂತೆ ಪೊಲೀಸ್‌ ಬಂದೋಬಸ್ತ್‌ನ್ನು ಮಾಡಿದ್ದರು.