ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸಮನಾಂತರ ವೈಜ್ಞಾನಿಕ ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದ್ದಲ್ಲಿ 15 ದಿನಗಳ ನಂತರ ಕಾರಂಜಾ ಸಂತ್ರಸ್ತ ಗ್ರಾಮಗಳ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಹೊಚಕನಳ್ಳಿ, ಜಿಲ್ಲೆಯಲ್ಲಿ ಕಾರಂಜಾ ಆಣೆಕಟ್ಟು ನಿರ್ಮಾಣ ಮಾಡಿ, ಸುಮಾರು 35 ವರ್ಷಗಳಿಂದ ಸತತ ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಕಳೆದ 872 ದಿನಗಳಿಂದ ಸತತವಾಗಿ ಅಹೋರಾತ್ರಿ ಧರಣಿಯನ್ನು ಮಾಡಿ ಕೊಂಡು ಬರುತ್ತಿದ್ದೇವೆ. 2018ರಿಂದ ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಧರಣಿ ಮಾಡುತ್ತಿದ್ದೇವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಎಚ್‌ಡಿ ಕುಮಾರ ಸ್ವಾಮಿ, ಬಸವರಾಜ ಬೊಮ್ಮಾಯಿ ಅವರುಗಳು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದಿದ್ದು ಹಾಗೆಯೇ ಡಿಸಿಎಂ ಡಿ.ಕೆ ಶಿವಕುಮಾರ ಅವರೂ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ವಿಧಾನಸಭೆಯಲ್ಲಿ ಈಶ್ವರ ಖಂಡ್ರೆ, ರಹೀಮ್ ಖಾನ್ ಡಾ.ಶೈಲೇಂದ್ರ ಬೆಲ್ದಾಳೆ, ಬಂಡೆಪ್ಪ ಖಾಶೆಂಪೂರ್ ಅವರಲ್ಲದೆ ಮಾಜಿ ಎಂಎಲ್‌ಸಿ ಅರವಿಂದ ಅರಳಿಯವರು ವಿಧಾನ ಪರಿಷತ್ತಿನಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಸುವಂತೆ ಪಟ್ಟುಹಿಡಿದು, ವಿಧಾನ ಪರಿಷತ್ತಿನಲ್ಲಿಯೇ ಧರಣಿ ಹೂಡಿದಾಗ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂತ್ರಸ್ತರ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿದ್ದರು ಅದೂ ಇಲ್ಲವಾಗಿದೆ.ಇದಷ್ಟೇ ಏಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭರವಸೆಯೂ ಸುಳ್ಳಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸಾಗರ ಖಂಡ್ರೆಯವರಿಗೆ ಗೆಲ್ಲಿಸಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದು, 6 ತಿಂಗಳು ಗತಿಸಿದರೂ ಬೇಡಿಕೆ ಈಡೇರಿಸಿರುವುದಿಲ್ಲ. ಹೀಗೆಯೇ ನಮ್ಮ ಕುರಿತಾದ ನಿಷ್ಕಾಳಜಿಯಿಂದ ಬೇಸತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, 15 ದಿನಗಳ ಒಳಗಾಗಿ ಆಸ್ತಿಗಳು ಕಳೆದುಕೊಂಡು ಕುಟುಂಬಗಳು ಬೀದಿ ಪಾಲಾದ ಕಾರಂಜಾ ಸಂತ್ರಸ್ತರ ಸಮನಾಂತರ ವೈಜ್ಞಾನಿಕ ಪರಿಹಾರ ನೀಡದಿದ್ದಲ್ಲಿ ಕಾರಂಜಾ ಮುಳುಗಡೆಯ 28 ಹಳ್ಳಿಗಳ ಕಾರಂಜಾ ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕಾರಂಜಾ ಮುಳುಗಡೆ ಹೋರಾಟ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್, ಕಾರ್ಯದರ್ಶಿ ನಾಗಶೆಟ್ಟಿ ಹಚ್ಚಿ, ನಿರ್ದೇಶಕರಾದ ರಾಜಕುಮಾರ ಕಮಲಪೂರೆ, ಮಾದಪ್ಪ ಖೌದೆ, ಸಂಗಾರೆಡ್ಡಿ ಔರಾದ್, ಯುಸುಫ್ ಮಿಯಾ ರೇಕುಳಗಿ, ರಾಜಶೇಖರ ಖಣಿರಂಜೋಳ, ಚಂದ್ರಶೇಖರ ಮುತ್ತಣ್ಣಾ, ಲಕ್ಷ್ಮಿಬಾಯಿ ಖೌದೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.