ಸಾರಾಂಶ
ಕಾರಟಗಿ: ಇಲ್ಲಿಗೆ ಸಮೀಪದ ನಾಗನಕಲ್‌ನಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕಂಪೌಂಡ್ ಸುತ್ತ ಹಾಕಲಾಗುತ್ತಿರುವ ತ್ಯಾಜ್ಯದಿಂದ ಶಾಲೆ ಗಬ್ಬೆದ್ದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಶಾಲಾ ಮಕ್ಕಳು, ಎಸ್‌ಡಿಎಂಸಿಯವರು ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಇಲ್ಲಿನ ತಾಪಂ ಕಚೇರಿಗೆ ತೆರಳಿದ ಶಾಲೆ ಮಕ್ಕಳು ಮತ್ತು ಎಸ್‌ಡಿಎಂಸಿ ಸದಸ್ಯರು ತಾಪಂ ಇಒ ಲಕ್ಷ್ಮಿದೇವಿ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಆಂಜನೇಯ ಭೋವಿ, ೨೨೬ ವಿದ್ಯಾರ್ಥಿಗಳಿರುವ ಶಾಲೆಯ ಕಂಪೌಂಡ್‌ಗೆ ಹೊಂದಿಕೊಂಡು ನಾಗನಕಲ್‌ನಿಂದ ಚಳ್ಳೂರು ಕ್ಯಾಂಪ್‌ಗೆ ಸಾಗುವ ಮುಖ್ಯ ರಸ್ತೆ ಇದೆ. ಇಲ್ಲಿನ ನಿವಾಸಿಗಳು, ಮಾಂಸ ಮಾರಾಟಗಾರರು ತಾವು ಸಂಗ್ರಹಿಸಿದ ತ್ಯಾಜ್ಯವನ್ನು ಇಲ್ಲಿ ಎಸೆಯುತ್ತಾರೆ. ಯಾವುದಾದರೂ ಪ್ರಾಣಿ ಸತ್ತರೆ ಅದನ್ನು ಕೂಡ ಇಲ್ಲೇ ಎಸೆಯುತ್ತಾರೆ. ಗಬ್ಬುವಾಸನೆಗೆ ಶಿಕ್ಷಕರು, ಮಕ್ಕಳು ಮೂಗು ಮುಚ್ಚಿಕೊಂಡೇ ಶಾಲೆಯಲ್ಲಿ ಕುಳಿತುಕೊಳ್ಳಬೇಕಾಗಿದೆ ಪರಿಸ್ಥಿತಿ ಇದೆ ಎಂದು ದೂರಿದರು. ಸುತ್ತಲಿನ ವಾರ್ಡ್‌ಗಳ ಮಕ್ಕಳು ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಶಾಲಾ ಕಿಟಕಿಗಳ ಮೂಲಕ ದುರ್ನಾತ ಕೊಠಡಿ ಒಳಗೆ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಾರ್ವಜನಿಕರಿಗೆ ಇಲ್ಲಿನ ಐದು ಎಕರೆಯ ಸುತ್ತಲಿನ ಶಾಲೆಯ ಬೃಹತ್ ಆವರಣವೇ ಕಸದ ತೊಟ್ಟಿಯಾದಂತಾಗಿದೆ. ಇದು ಶಾಲಾ ಮಕ್ಕಳಿಗೆ ಶಾಪವಾಗಿ ಪರಿಣಮಿಸಿದೆ. ಊರವರಿಗೆ ತ್ಯಾಜ್ಯ ಎಸೆಯುವುದಕ್ಕೆ ಪರ್ಯಾಯ ಸ್ಥಳ ಇಲ್ಲ ಎನ್ನುವ ನೆಪವೊಡ್ಡಿ ಇಲ್ಲಿ ಕಸ ಹಾಕುತ್ತಿದ್ದಾರೆ. ಆದರೆ ಗ್ರಾಪಂ ಇತ್ತಕಡೆ ತಿರುಗಿಯೂ ನೋಡುತ್ತಿಲ್ಲ ಎಂದರು.ಸ್ವಚ್ಛತೆ ಕಾಪಾಡಬೇಕಾದ ಕರ್ತವ್ಯ ಸಾರ್ವಜನಿಕರದ್ದು. ಶಾಲಾ ಆವರಣದ ಹಿಂದೆ-ಮುಂದೆ ತ್ಯಾಜ್ಯ ಎಸೆಯದಂತೆ ತಿಳಿ ಹೇಳಿ ಅವ್ಯವಸ್ಥೆಯ ವಾತಾವರಣ ಸರಿಪಡಿಸಬೇಕು. ಮಕ್ಕಳಿಗೆ ಶುದ್ಧ ವಾತಾವರಣ ನಿರ್ಮಿಸಿ ಕಾಳಜಿ ವಹಿಸಿ ಎಂದು ಮನವಿಯಲ್ಲಿ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಾಪಂ ಇಒ ಅಧಿಕಾರಿ ಲಕ್ಷ್ಮಿದೇವಿ ಮಾತನಾಡಿ, ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ಪಂಚಾಯತ್ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುತ್ತೇವೆ. ಜೊತೆಗೆ ಕಸ ಎಸೆಯದಂತೆ ಸುತ್ತಮುತ್ತಲಿನ ಅಂಗಡಿಕಾರರಿಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಚಿದಾನಂದ ಗದ್ದಿ, ವೆಂಕಟೇಶ ಕೆಂಚನಗುಡ್ಡ ಇದ್ದರು.