ಲೋಕಾಪೂರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ರೈಲು ಸಂಪರ್ಕ : ಕರವೇ, ರೈತಸಂಘ ಬೆಂಬಲ

| Published : Nov 08 2024, 01:21 AM IST / Updated: Nov 08 2024, 10:52 AM IST

ಲೋಕಾಪೂರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ರೈಲು ಸಂಪರ್ಕ : ಕರವೇ, ರೈತಸಂಘ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

 ಲೋಕಾಪೂರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ರೈಲು ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರಾಮದುರ್ಗ ತಾಲೂಕು ರೈಲ್ವೆ ಹೋರಾಟ ಕ್ರಿಯಾಸಮಿತಿ ನ.12ರಂದು ನಡೆಸಲಿರುವ ಬೃಹತ್ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ನಾರಯಾಣಗೌಡ ಬಣ) ಸಂಪೂರ್ಣ ಬೆಂಬಲ ನೀಡಲಿದೆ 

 ರಾಮದುರ್ಗ : ಲೋಕಾಪೂರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ರೈಲು ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರಾಮದುರ್ಗ ತಾಲೂಕು ರೈಲ್ವೆ ಹೋರಾಟ ಕ್ರಿಯಾಸಮಿತಿ ನ.12ರಂದು ನಡೆಸಲಿರುವ ಬೃಹತ್ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ನಾರಯಾಣಗೌಡ ಬಣ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ರಾಠೋಟ ಹೇಳಿದರು.

ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದುರ್ಗ ತಾಲೂಕು ಐತಿಹಾಸಿಕ ಹಿನ್ನೆಲೆಯುಳ್ಳ ಶಬರಿ ದೇವಸ್ಥಾನ, ಬೃಹದಾಕಾರದ ಶಿವನ ಮೂರ್ತಿ ಹಾಗೂ ನಂದಿ ಮತ್ತು ಐತಿಹಾಸಿಕ ಗೋಡಚಿ ವೀರಭದ್ರೇಶ್ವರ ಕ್ಷೇತ್ರ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರ ಒಳಗೊಂಡಿದೆ. ಇಲ್ಲಿಗೆ ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲಕ್ಕೆ ರೈಲು ಸಂಪರ್ಕ ಅಗತ್ಯವಾಗಿದೆ. ಪಕ್ಕದ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೂ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಭಕ್ತರು ಆಗಮಿಸುವ ಕಾರಣ ರೈಲು ಸಂಪರ್ಕ ದೊರಕಿಸಲು ಪಕ್ಷಾತೀತವಾಗಿ ನಡೆದಿರುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುತ್ತದೆ. ಈ ಹೋರಾಟಕ್ಕೆ ತಾಲೂಕಿನ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಜಹೂರ ಹಾಜಿ ಮಾತನಾಡಿ, ಹಿಂದುಳಿದ ರಾಮದುರ್ಗ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ರೈಲ್ವೆ ಸಂಪರ್ಕ ಅಗತ್ಯವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಅರಮನಿ, ಮಹಿಳಾ ಘಟಕದ ಉಪಾಧ್ಯಕ್ಷೆ ಮಾಲಾ ಕೇರಿ, ಗ್ರಾಮೀಣ ಘಟಕದ ಅಧ್ಯಕ್ಷ ಹನಮಂತ ಕುಲಗೋಡ, ಉಪಾಧ್ಯಕ್ಷ ಮಹ್ಮದಹಾಸೀಂ ಹಾಜಿ, ಸಾಗರ ಮುನವಳ್ಳಿ ಸೇರಿದಂತೆ ಹಲವರಿದ್ದರು.

ರಾಜ್ಯರೈತ ಸಂಘ, ಹಸಿರು ಸೇನೆ ಬೆಂಬಲ:

ನ.12ರಂದು ರೈಲ್ವೆ ಹೋರಾಟ ಸಮಿತಿ ರಾಮದುರ್ಗದಲ್ಲಿ ನಡೆಸಲಿರುವ ಬೃಹತ್ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲ ನೀಡಲಿವೆ ಎಂದು ರೈತ ಸಂಘದ ಮುಖಂಡ ಜಗದೀಶ ದೇವರಡ್ಡಿ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ರಾಮದುರ್ಗ ಕ್ಷೇತ್ರ ಆರ್ಥಿಕ ಮತ್ತು ಕೈಗಾರಿಕೆಯಲ್ಲಿ ಅತಿ ಹಿಂದುಳಿದ ತಾಲೂಕಾಗಿದೆ. ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿದ್ದು, ಕೈಗಾರಿಕೆಗಳ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ಅಗತ್ಯವಾಗಿದೆ. ಈಗಾಗಲೇ ಹೈದ್ರಾಬಾದ್ ನಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದು, ಇದರೊಂದಿಗೆ ರೈಲ್ವೆ ಸಂಪರ್ಕ ಸೇರಿದರೆ ಮತ್ತಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿ ಜನರಿಗೆ ಉದ್ಯೋಗ ದೊರಕಿ ಜನರು ಆರ್ಥಿಕವಾಗಿ ಸದೃಢರಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಗೆ ಶಿಕ್ಷಣ ಕಾಶಿಯಾಗಿರುವ ಹಾಗೂ ಹೈಕೋರ್ಟ್‌ ಪೀಠಕ್ಕೆ ಧಾರವಾಡಕ್ಕೆ ಹೋಗಿಬರಲು ಜನಸಾಮಾನ್ಯರಿಗೆ ಸಮಯ ಮತ್ತು ಹಣದ ಉಳಿತಾಯವಾಗಿಲಿದೆ ಎಂದರು.

ಕಾರಣ ತಾಲೂಕಿನಲ್ಲಿ ನಡೆಯುವ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನ.12 ರಂದು ರಾಮದುರ್ಗಕ್ಕೆ ಆಗಮಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹನುಮಂತ ಬೇವೂರ, ಶಂಕರ ಕೊರವರ ಇತರರು ಇದ್ದರು.