ಸಾರಾಂಶ
ಕಳಸಾ ಬಂಡೂರಿ- ಮಹಾದಾಯಿ ನಾಲೆ ಜೋಡಣೆಗೆ ಆಗ್ರಹಿಸಿ ಸೆ.19 ಮತ್ತು 20ರಂದು ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನರಗುಂದದಿಂದ ಗದಗವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರಮೇಶ್ ಮಾನೆ ಹರಿಹರದಲ್ಲಿ ಹೇಳಿದ್ದಾರೆ.
ಹರಿಹರ: ಕಳಸಾ ಬಂಡೂರಿ- ಮಹಾದಾಯಿ ನಾಲೆ ಜೋಡಣೆಗೆ ಆಗ್ರಹಿಸಿ ಸೆ.19 ಮತ್ತು 20ರಂದು ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನರಗುಂದದಿಂದ ಗದಗವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರಮೇಶ್ ಮಾನೆ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಸಂಘಟನೆಯ ಉತ್ತರ ಕರ್ನಾಟಕ, ಬೆಳಗಾವಿ ವಿಭಾಗ ಹಾಗೂ ದಾವಣಗೆರೆ ಪದಾಧಿಕಾರಿಗಳ ಸಹಕಾರದೊಂದಿಗೆ ಕಳಸಾ ಬಂಡೂರಿ ಮಹಾದಾಯಿ ನಾಲೆ ಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ 48 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹುಬ್ಬಳ್ಳಿಯಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗಳಿಗೆ ಮಾಲಾರ್ಪಣೆ ಮೂಲಕ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಹರಿಹರ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಗರ ಅಧ್ಯಕ್ಷ ಪ್ರೀತಂ ಬಾಬು ರಾಜ್ಯಾದ್ಯಾಂತ ಸುಮಾರು 5000ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರು ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಹಿಂದೆ ಕಳಸ ಬಂಡೂರಿ ಹೋರಾಟದ ರೂವಾರಿಯಾಗಿದ್ದ ಮತ್ತು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಅರ್ಪಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಸಿದ್ದಪ್ಪ, ಅಕ್ಬರ್ ಅಲಿ, ರುದ್ರೇಶ್, ಅಹಮದ್ ಮುಂತಾದವರು ಉಪಸ್ಥಿತರಿದ್ದರು.