- ತೃತೀಯ ಭಾಷೆಗೆ ಗ್ರೇಡಿಂಗ್ ಕುರಿತ ರಾಜ್ಯ ಸರ್ಕಾರದ ನಿರ್ಧಾರ
- ಈ ನಿರ್ಧಾರ ಪುನಃ ಪರಿಶೀಲಿಸುವಂತೆ ರಾಜ್ಯಪಾಲರಿಂದ ಮನವಿ- ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್‌ರಿಂದ ಹಿಂದಿ ಓಲೈಕೆ: ಕಿಡಿ
- ನಾಡ ವಿರೋಧಿ ರಾಜ್ಯಪಾಲರ ಕಡೆದುಕೊಳ್ಳುವಂತೆ ಕರವೇ ಆಗ್ರಹ- ಬ್ರಿಟಿಷ್ ಆಡಳಿತದಂತೆ ಹಿಂದಿ ಸಾಮ್ರಾಜ್ಯಶಾಹಿಗಳಿಂದ ದಬ್ಬಾಳಿಕೆ
- ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡೀಸಿಗೆ ಮನವಿ
- ರಾಜ್ಯದ ಬೇಕುಬೇಡಗಳಿಗೆ ಸ್ಪಂದಿಸಬೇಕಿರುವುದು ರಾಜ್ಯ ಸರ್ಕಾರ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪತ್ರ ಬರೆದಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರ ಬಣದ ಅಧ್ಯಕ್ಷ ಎಚ್.ಎನ್. ಮಂಜೇಶ್ ನೇತೃತ್ವದಲ್ಲಿ ಸಮಾವೇಶಗೊಂಡ ವೇದಿಕೆಯ ಪದಾಧಿಕಾರಿಗಳು, ಜಿಲ್ಲಾಡಳಿತ ಭವನದ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕು ಮುನ್ನಾ ಮಾತನಾಡಿ ಜಿಲ್ಲಾಧ್ಯಕ್ಷ ಎಚ್.ಎನ್. ಮಂಜೇಶ್, ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ತೀವ್ರ ಖಂಡನೀಯ ಎಂದರು.ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.
ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.ಬೆಂಗಳೂರು ಸಂಘದ ಮನವಿಗೆ ಸ್ಪಂದನೆ-ಹುನ್ನಾರ:
ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ತುರ್ತಾಗಿ ರಾಜ್ಯಪಾಲರು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದೇ ಒಂದು ದೊಡ್ಡ ಹುನ್ನಾರವಾಗಿದೆ. ಕರ್ನಾಟಕವನ್ನು ವಲಸೆ ಬರುತ್ತಿರುವ ಹಿಂದಿಭಾಷಿಕರಿಗಾಗಿ ಸುರಕ್ಷಿತ ಸ್ವರ್ಗವನ್ನಾಗಿಸುವ ಉದ್ದೇಶ ಇದೆ. ಕರ್ನಾಟಕದ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ರಾಜ್ಯ ಸರ್ಕಾರವನ್ನು ಇದಕ್ಕಾಗಿಯೇ ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದರು.ಬ್ರಿಟಿಷ್ ರೀತಿ ಹಿಂದಿ ಸಾಮ್ರಾಜ್ಯಶಾಹಿ:
ರಾಜ್ಯಪಾಲರ ಈ ಪತ್ರವನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಎಸೆಯಬೇಕು. ಕನ್ನಡಿಗರ ಹಿತದೃಷ್ಟಿಗೆ ವಿರುದ್ಧವಾಗಿ ಯಾರೇ ಏನೇ ಹೇಳಿದರೂ ಅದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕಿಲ್ಲ ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ನಮ್ಮ ನೆಲದ ಅಸ್ಥಿತೆಯನ್ನು ಉಳಿಸಿಕೊಳ್ಳುತ್ತೇವೆ. ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದನ್ನು ಬದಲಿಸುವ ಪ್ರಯತ್ನ ಯಾರೇ ಮಾಡಿದರೂ ರಕ್ತಕ್ರಾಂತಿಯಾಗುತ್ತದೆ. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಲಿ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ವಿ. ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೂಪೇಶ್, ರಾಘವೇಂದ್ರ, ಸಹ ಕಾರ್ಯದರ್ಶಿ ಅರ್ಜುನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜು, ಹೇಮಂತ್, ತಾಲೂಕು ಅಧ್ಯಕ್ಷರಾದ ಚಾಮರಾಜನಗರ ಸಂತೋಷ, ಗುಂಡ್ಲುಪೇಟೆ ರಮೇಶ್ ನಾಯಕ, ಕೊಳ್ಳೇಗಾಲ ಆಯಾಜ್ ಕನ್ನಡಿಗ, ಯಳಂದೂರು ಮಹೇಂದ್ರ, ಮಹಿಳಾ ಘಟಕದ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಮೊದಲಾದರು ಇದ್ದರು.
---8ಸಿಎಚ್ಎನ್14
ರಾಜ್ಯಪಾಲರ ಪತ್ರವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.