- ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆ ಪದೋನ್ನತಿ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಯ ಪದೋನ್ನತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಲು ನಿರ್ಧರಿಸಿರುವುದನ್ನು ಖಂಡಿಸಿ ಜೂ.25ರಂದು ಹುಬ್ಬಳ್ಳಿಯ ರೈಲ್ವೆ ನೈರುತ್ಯ ವಲಯ ಕಚೇರಿ ಬಳಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೇ ನಡೆಯುವ ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಯ ಪದೋನ್ನತಿ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಲು ಮುಂದಾಗಿರುವುದು ರೈಲ್ವೆ ಇಲಾಖೆ ಮತ್ತೊಮ್ಮೆ ಕನ್ನಡಿಗರ ಬೆನ್ನಿಗೆ ಚೂರಿ ಹಾಕುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಹಿಂದಿ, ಇಂಗ್ಲಿಷ್‌ನಲ್ಲಷ್ಟೇ ಪರೀಕ್ಷೆ ನಡೆಸಲು ಹೊರಟಿರುವುದು ಕನ್ನಡಿಗರ ಉದ್ಯೋಗ ಮತ್ತು ಬಡ್ತಿಯ ಹಕ್ಕು ಹಾಗೂ ಭಾಷಾ ಸ್ವಾಭಿಮಾನದ ಮೇಲೆ ನಡೆಸುತ್ತಿರುವ ಬಹಿರಂಗ ಯುದ್ಧವಾಗಿದೆ. ಇದರ ವಿರುದ್ಧ ಹುಬ್ಬಳ್ಳಿಯಲ್ಲಿ ಕರವೇ ಕೈಗೊಂಡ ನಿರ್ಣಾಯಕ ಹೋರಾಟದಲ್ಲಿ ಜಿಲ್ಲೆಯಿಂದ 200ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಜೂ.25ರಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಶೇ.15 ಕೋಟಾದಡಿ ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಾಗಿ ಕಂಪ್ಯೂಟರ್ ಆಧಾರಿತ ಪದೋನ್ನತಿ ಪರೀಕ್ಷೆ ನಡೆಸಲು ರೈಲ್ವೆ ಸಿದ್ಧತೆ ನಡೆಸಿದೆ. ರೈಲ್ವೆ ಅಧಿಕೃತ ದಾಖಲೆಗಳ ಪ್ರಕಾರ ಒಟ್ಟು 430, ಹುಬ್ಬಳ್ಳಿಯಲ್ಲಿ 179, ಬೆಂಗಳೂರಿನಲ್ಲಿ 112 ಹಾಗೂ ಮೈಸೂರಿನಲ್ಲಿ 139 ಹುದ್ದೆಗೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಆದರೆ, ಕನ್ನಡಿಗ ನೌಕರರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಲಾಗಿದೆ ಎಂದು ಆರೋಪಿಸಿದರು.

ಕರ್ನಾಟಕದ ನೆಲ, ತೆರಿಗೆ, ರೈಲು ಮಾರ್ಗ, ನೌಕರರ ಸೇವೆ ಬೇಕು. ಆದರೆ ಕನ್ನಡ ಮಾತ್ರ ಬೇಡ ಎಂಬ ಧೋರಣೆ ಕನ್ನಡಿಗರು ಸಹಿಸುವುದಿಲ್ಲ. ತಕ್ಷಣವೇ ರೈಲ್ವೆ ಇಲಾಖೆಯು ತನ್ನ ನಿರ್ಧಾರ ಹಿಂಪಡೆದು ಪರೀಕ್ಷೆಯನ್ನು ಕನ್ನಡದಲ್ಲೂ ನಡೆಸುವ ಕುರಿತು ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಜೂ.25ರಂದುನ ನಡೆಯುವ ಪರೀಕ್ಷೆ ವಿರೋಧಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳೂ ನಡೆಯಲಿವೆ ಎಂದರು.

ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳ ಎದುರು ಸಾವಿರಾರು ಕನ್ನಡಾಭಿಮಾನಿಗಳು, ರೈಲ್ವೆ ನೌಕರರು ಹಾಗೂ ಕರವೇ ಕಾರ್ಯಕರ್ತರು ಸೇರಿ ಹೋರಾಟ ಕೈಗೊಳ್ಳಲಿದ್ದು, ಮುಂದಿನ ಪರಿಣಾಮಗಳಿಗೆ ರೈಲ್ವೆ ಇಲಾಖೆಯೇ ಸಂಪೂರ್ಣ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಮುಖಂಡರಾದ ಗೋಪಾಲ ದೇವರಮನಿ, ಖಾದರ್ ಬಾಷಾ, ರವಿಕುಮಾರ, ಜಬೀವುಲ್ಲಾ, ತಮನ್ನಾ ರಫೀಕ್, ಸಲ್ಮಾ ಬಾನು, ಮಂಜುಳಮ್ಮ ಇತರರು ಇದ್ದರು.

- - -

(ಕೋಟ್‌)

ಜೂ.25ರಂದು ನಡೆಯುವ ಗೂಡ್ಸ್ ಟ್ರೈನ್ ಮ್ಯಾನೇಜರ್ ಪದೋನ್ನತಿ ಪರೀಕ್ಷೆಯನ್ನು ತಕ್ಷಣವೇ ಮುಂದೂಡಿ, ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನೂ ಸೇರಿಸಿ ಪರೀಕ್ಷೆಯ ಹೊಸ ವೇಳಾಪಟ್ಟಿ ಪ್ರಕಟಿಸಲಿ. ಕರ್ನಾಟಕದಲ್ಲಿ ನಡೆಯುವ ಎಲ್ಲಾ ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯ ಆಯ್ಕೆಯಾಗಿ ಸೇರಿಸಲಿ. ಕನ್ನಡಿಗರ ಭಾಷಾ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಾಗಬೇಕು. ರೈಲ್ವೆಯ ಎಲ್ಲ ಹಂತಗಳಲ್ಲಿ ಕನ್ನಡದ ಸಂವಿಧಾನಾತ್ಮಕ ಮಾನ್ಯತೆಗೆ ತಕ್ಕ ಸ್ಥಾನ ಕಲ್ಪಿಸಬೇಕು.

- ಎಂ.ಎಸ್.ರಾಮೇಗೌಡ, ಜಿಲ್ಲಾಧ್ಯಕ್ಷ, ಕರವೇ.

- - -

-22ಕೆಡಿವಿಜಿ4: ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.