ರೈಲ್ವೆ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳನ್ನು ರಾಜ್ಯದಲ್ಲಿ ಕನ್ನಡದಲ್ಲೇ ನಡೆಸಬೇಕೆಂದು ಒತ್ತಾಯಿಸಿದ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು. ಮುಂದಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ರೈಲ್ವೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರೈಲ್ವೆ ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳನ್ನು ರಾಜ್ಯದಲ್ಲಿ ಕನ್ನಡದಲ್ಲೇ ನಡೆಸಬೇಕೆಂದು ಒತ್ತಾಯಿಸಿದ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು. ಮುಂದಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ರೈಲ್ವೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.ಇಲ್ಲಿನ ಡಾ। ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಗದಗ ರಸ್ತೆಯಲ್ಲಿರುವ ರೈಲ್ ಸೌಧದವರೆಗೆ ಸಾಗಿತು. ರೈಲ್ವೆ ಇಲಾಖೆಯಲ್ಲಿ ಇರುವ ಕನ್ನಡಿಗ ಅಭ್ಯರ್ಥಿಗಳು ಹಾಗೂ ನೌಕರರಿಗೆ ಸಮಾನ ಅವಕಾಶ ದೊರೆಯುತ್ತಿಲ್ಲ. ರೈಲ್ವೆ ನೇಮಕಾತಿ ಬಡ್ತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತಿದೆ. ಇದರಿಂದ ಕನ್ನಡಿಗ ನೌಕರಸ್ಥರಿಗೆ ವಿವಿಧ ಹುದ್ದೆಗಳಲ್ಲಿ ಬಡ್ತಿ ಸಿಗುತ್ತಿಲ್ಲ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನೇಮಕಾತಿ ಅಧಿಸೂಚನೆ ಕನ್ನಡದಲ್ಲಿ ಕೊಡಬೇಕು. ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷೆಯ ಬಳಕೆಯ ಕುರಿತು ಪರಿಶೀಲನಾ ಸಮಿತಿ ರಚಿಸಬೇಕು. ಭಾಷಾ ಆಧಾರಿತ ಭೇದ ಭಾವದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯ ರಾಜ್ಯಗಳಿಗೆ ಶೇ.75ರಷ್ಟು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಕರವೇ ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ಮಾತನಾಡಿ, ಕನ್ನಡ ಭಾಷೆಗೆ ಅವಕಾಶ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಅನಂತ, ಕನ್ನಡದ ಬಗ್ಗೆ ನಮಗೆ ಅಭಿಮಾನವಿದೆ. ಸದ್ಯ ಉಳಿದ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಾಗುತ್ತಿದೆ. ಬಡ್ತಿ ಪರೀಕ್ಷೆಗಳಲ್ಲೂ ಕನ್ನಡ ಬಳಕೆ ಕುರಿತು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಕರವೇ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ, ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ಬಾಗಲಕೋಟೆ ಜಿಲ್ಲಾಧ್ಯಕ್ಷ ಮುತ್ತು ಅರಗಿಣಿ ಶೆಟ್ಟಿ, ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ವಾಲಿಕಾರ, ಗದಗ ಜಿಲ್ಲಾಧ್ಯಕ್ಷ ತಿಮ್ಮಣ್ಣ ದೋಣಿ, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಪ್ರವೀಣ ಗಾಯಕವಾಡ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಅಕ್ಷಯ, ಶ್ರೀಶೈಲಂ ಮಿರ್ಜಿ, ಸಂಜೀವ ದುಮುಕನಾಳ ಇದ್ದರು. ಬಾಕ್ಸ್...
‘ಕನ್ನಡಪ್ರಭ’ದಲ್ಲಿ ನಿರಂತರ ವರದಿಕನ್ನಡ ಭಾಷೆ ಇಲ್ಲದೇ ರೈಲ್ವೆ ಮುಂಬಡ್ತಿ ಪರೀಕ್ಷೆ ನಡೆಸುತ್ತಿರುವ ಕುರಿತು ‘ಕನ್ನಡಪ್ರಭ’ದಲ್ಲಿ ಮಾ.15, 16, 17ರಂದು ನಿರಂತರ ವರದಿ ಪ್ರಕಟಿಸಿತ್ತು. ವರದಿ ಗಮನಿಸಿ ಮಾ.17ರಂದು ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಇದರಿಂದ ಎಚ್ಚೆತ್ತ ರೈಲ್ವೆ ಅಧಿಕಾರಿಗಳು ನಡೆಯುತ್ತಿದ್ದ ಪರೀಕ್ಷೆಗಳನ್ನೆಲ್ಲ ಸ್ಥಗಿತಗೊಳಿಸಿ ಮುಂದೂಡಿದ್ದರು. ಜತೆಗೆ ಈ ಗೊಂದಲ ಪರಿಹಾರ ಆಗುವ ವರೆಗೆ ಯಾವುದೇ ಅಧಿಸೂಚನೆ ಹೊರಡಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಈಗ ಮತ್ತೆ ಹಲವು ಬಡ್ತಿ ಹುದ್ದೆಗಳಿಗಾಗಿ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.