ಮುಂಬರುವ ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ಶಿಶುನಾಳ ಶರೀಫರ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿಗ್ಗಾಂವಿ: ಮುಂಬರುವ ರಾಜ್ಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ಶಿಶುನಾಳ ಶರೀಫರ ಪ್ರಾಧಿಕಾರ ರಚಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರಾಮು ತಳವಾರ ಮಾತನಾಡಿ, ಕರ್ನಾಟಕದ ಕಬೀರ ಎಂದೇ ಖ್ಯಾತಿ ಪಡೆದ ಹಾಗೂ ತತ್ವಪದಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಸಂತ ಶಿಶುವಿನಹಾಳ ಶರೀಫರ ಹೆಸರಿನಿಂದ ಪ್ರಾಧಿಕಾರ ರಚಿಸುವಂತೆ ಈ ಭಾಗದ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳು ಈ ಬಗ್ಗೆ ಹಲವು ದಶಕಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಬರುವ ಬಜೆಟ್ ಮಂಡನೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರಾಧಿಕಾರ ಘೋಷಣೆ ಮಾಡದಿದ್ದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ನಿವಾಸದ ಎದುರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಕರ್ನಾಟಕ ಜನಪದ ಅಕಾಡೆಮಿಯ ಮಾಜಿ ಸದಸ್ಯ ಬಸವರಾಜ ಗೊಬ್ಬಿ ಮಾತನಾಡಿ, ಈ ಹಿಂದಿನ ಸರ್ಕಾರ ಶರೀಫಗಿರಿಯನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಿದರೂ ಸಹ ಪ್ರಾಧಿಕಾರ ರಚನೆ ಸಾಧ್ಯವಾಗಲಿಲ್ಲ. ಇಲ್ಲಿ ಪ್ರಾಧಿಕಾರ ಸ್ಥಾಪನೆಯಿಂದ ಶರೀಫರ ತತ್ವ ಸಿದ್ಧಾಂತಗಳನ್ನು ಹಲವಾರು ಭಾಷೆಗಳಲ್ಲಿ ಪ್ರಕಟಿಸಲು ಹಾಗೂ ಭಾವೈಕ್ಯ ಮನೋಭಾವನೆಯನ್ನು ಮತ್ತಷ್ಟು ಪ್ರಸಾರ ಮಾಡಲು ಸಾಧ್ಯವಾಗುತ್ತದೆ. ಕಾರಣ ರಾಜ್ಯ ಸರ್ಕಾರ ಸದರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಧಿಕಾರ ಘೋಷಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷ ಎಸ್.ಎಸ್. ಭರಮಣ್ಣನವರ, ಮುಖಂಡ ಎಸ್.ಎಸ್. ತಳವಾರ, ಜಗದೀಶ ಜಕ್ಕಣ್ಣನವರ (ಕಬನೂರ), ಯಲ್ಲಪ್ಪ ತೀರ್ಥ, ಬಸವಣ್ಣೆಯ್ಯ ಪೂಜಾರ, ಫಕೀರಪ್ಪ ವಾಲ್ಮೀಕಿ, ನಜೀರಗೌಡ್ರು ಅಲ್ಲಿಗೌಡ್ರ, ಹುಸೇನಸಾಬ ವಾಲೀಕಾರ, ಬಸವಣ್ಣೆಯ್ಯ ಹಿರೇಮಠ, ಬಸನಗೌಡಾ ಹುಡೇದ, ಸೇರಿದಂತೆ ಹಲವರು ಉಪಸ್ಥತರಿದ್ದರು.