ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಕೃಷ್ಣಾಪುರ-ಗಾಂಧಿನಗರದ ಬಳಿಯ ಕಿಕ್ಕೇರಿ ಉಪವಿಭಾಗದ ಹೇಮಾವತಿ ಜಲಾಶಯದ ಎಡದಂಡೆಯ 54ನೇ ವಿತರಣಾ ನಾಲೆ ಸರಪಳಿ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನೀರಾವರಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.ಭಾನುವಾರ ನಾಲೆ ಕಾಮಗಾರಿ ಸ್ಥಳಕ್ಕೆ ಕರವೇ ತಾಲೂಕು ಅಧ್ಯಕ್ಷ ವೇಣು ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು ಕಾಮಗಾರಿ ವೀಕ್ಷಣೆ ಮಾಡಿದರು. ಕಳಪೆ ಕಾಮಗಾರಿ ಕಂಡು ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿ ಎಇಇ ಚಂದ್ರೇಗೌಡರನ್ನು ಬರಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು20 ವರ್ಷಗಳ ನಿರಂತರರೈತರ ಹೋರಾಟದ ಫಲ ನಾಲೆ ದುರಸ್ತಿಗೆ 2 ವರ್ಷಗಳ ಹಿಂದೆ ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. 55 ಕೋಟಿ ರು.ಅನುದಾನದಲ್ಲಿ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ದೂರಿದರು.ಕ್ರಿಯಾಯೋಜನೆ ರೀತಿ ಕಾಮಗಾರಿ ನಡೆಯುತ್ತಿಲ್ಲ. ಏರಿ, ನಾಲಾ ಗೋಡೆ ಲೈನಿಂಗ್, ಅಡ್ಡ ಮೋರಿಗಳ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಬಿರುಕು, ಕುಸಿಯುತ್ತಿವೆ. ಗುಣಮಟ್ಟದ ಸಾಮಗ್ರಿ ಬಳಸದೆ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಮಾಡುತ್ತಿರುವುದು ಕಾಣುತ್ತಿದೆ ಎಂದು ಆರೋಪಿಸಿದರು.
ಸಿಮೆಂಟು ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಲೈನಿಂಗ್ ತೇಪೆ ಹಾಕಿದಂತಿದೆ. ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಕೋಟ್ಯಾಂತರ ಸರ್ಕಾರದ ಸಾರ್ವಜನಿಕರ ಹಣ ಲೂಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.ಕೂಡಲೇ ಸ್ಥಳಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.
ಹೇಮಾವತಿ ನೀರಾವರಿ ಇಲಾಖೆ ನಿವೃತ್ತ ನೌಕರ ಜಯಣ್ಣ ಮಾತನಾಡಿ, ಶೇ.50 ರಷ್ಟು ಕಾಮಗಾರಿ ಮುಗಿದಿದೆ. ಎಲ್ಲೂ ಕ್ರಿಯಾಯೋಜನೆ ರೀತಿ ಕಾಮಗಾರಿ ನಡೆದಿಲ್ಲ ಎಂದು ಕಿಡಿಕಾರಿದರು.ಕಿಕ್ಕೇರಿ ವಿಭಾಗದ ಎಇಇ ಚಂದ್ರೇಗೌಡ ಮಾತನಾಡಿ, ಮಳೆಗಾಲವಿದ್ದು ಕಾಮಗಾರಿ ವಿಳಂಭವಾಗುತ್ತಿದೆ. ಕಳಪೆ ಕಾಮಗಾರಿ ನಡೆದಿದ್ದಲ್ಲಿ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಲಕ್ಷ್ಮೀಪುರ ಶಿವಪ್ರಸಾದ್, ಹೊಸಹೊಳಲು ಗೋಪಿ, ಅನಿಲ್, ಗುಂಡಣ್ಣ, ಶಿವಕುಮಾರ್, ಅಜಯ್ ಹಲವರು ಭಾಗವಹಿಸಿದ್ದರು.