ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶ ಮತ್ತು ದೇಶವಾಸಿಗಳ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಹಾಗೂ 26ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಚರಿಸಲಾಗುವ ಈ ಸಂಭ್ರಮ ದೇಶಾಭಿಮಾನ, ಸೈನಿಕರ ಗೌರವದ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ನಗರದ ಸೈನಿಕ ಪಾರ್ಕ್‌ನಲ್ಲಿ ಸೈನಿಕ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ನೆಹರೂ ಸ್ಟೇಡಿಯಂ ಗೆಳೆಯರ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪಗೌರವ ಸಲ್ಲಿಸಿ ಬಳಿಕ ಮಾತನಾಡಿದ ಅವರು,
ಈ ವಿಜಯೋತ್ಸವದ ಸಂಭ್ರಮವನ್ನು ಪ್ರತಿ ವರ್ಷ ಸಡಗರ ಸಂಭ್ರಮಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ದೇಶದ ರಕ್ಷಣೆಯ ವಿಷಯದಲ್ಲಿ ನಮ್ಮ ದೇಶದ ಪ್ರತಿ ಸೈನಿಕರೂ ಕಠಿಬದ್ದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದೇಶದ ಪ್ರತಿ ವ್ಯಕ್ತಿಯ ನೆಮ್ಮದಿಯ ಬದುಕಿನ ಹಿಂದೆ ಸೈನಿಕರ ಸಹಕಾರವಿರುವುದನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಎಂದರು.ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ನಮ್ಮ ವೀರಯೋಧರು ಪ್ರಾಣಾರ್ಪಣೆ ಮಾಡಿರುವುದು ನೋವನ್ನುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ದೇಶದ ಪ್ರತಿ ನಾಗರೀಕರೂ ಹುತಾತ್ಮರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಪ್ರಮಾಣ ಕೈಗೊಳ್ಳಬೇಕು. ದೇಶದ ಭದ್ರತೆಯ ಪ್ರಶ್ನೆ ಎದುರಾಗುವ ಎಲ್ಲಾ ಹಂತದಲ್ಲಿಯೂ ನಾವು ಸೈನಿಕರೊಂದಿಗೆ ಸೈನಿಕರಾಗಿ, ವೀರಸೇನಾನಿಗಳಂತೆ ನಿಲ್ಲಬೇಕು. ಈ ಕಾರ್ಯಕ್ರಮವು ಸೈನಿಕರು, ಮಾಜಿಸೈನಿಕರು, ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ, ದೇಶದ ಪ್ರತಿ ನಾಗರೀಕರಿಗೂ ದೇಶಪ್ರೇಮ ಜಾಗೃತಿಗೊಳಿಸುವಂತೆ ಮಾಡುವ ಉದ್ದೇಶ ಇದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು ಸಶಸ್ತ್ರ ಪಡೆಗಳ ನಿರಂತರ ಧೈರ್ಯ ಮತ್ತು ಸಮರ್ಪಣೆ, ರಾಷ್ಟ್ರೀಯ ಒಗ್ಗಟ್ಟು, ಸೇವೆ ಮತ್ತು ಶಾಂತಿಯ ಮೌಲ್ಯಗಳು ಮತ್ತು ಭಾರತವನ್ನು ಸುರಕ್ಷಿತವಾಗಿಡುವ ನಿಜ ಜೀವನದ ವೀರರನ್ನು ನೆನಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಯುವ ಮನಸ್ಸುಗಳಲ್ಲಿ ದೇಶಭಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಕೃತಜ್ಞತೆಯ ಭಾವನೆಯನ್ನು ತುಂಬಲು ಶಾಲೆಗಳು ಈ ದಿನವನ್ನು ಆಚರಿಸುತ್ತವೆ. ಇದು ವಿದ್ಯಾರ್ಥಿಗಳು ತಮ್ಮ ದೇಶವನ್ನು ಮೆಚ್ಚುವಂತೆ ಮತ್ತು ಏಕತೆ ಮತ್ತು ಸಾಮರಸ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತದೆ.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಈ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ವೀರಯೋಧರ ಸವಿನೆನಪಿಗಾಗಿ ಆಚರಿಸಲಾಗುತ್ತಿರುವ 26ನೇ ಕಾರ್ಗಿಲ್ ವಿಜಯೋತ್ಸವ ಹುತಾತ್ಮ ಯೋಧರ, ವೀರನಾರಿಯರ ಕುಟುಂಬಕ್ಕೆ ಬೆಂಬಲವಾಗಿರಲಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ರೂಪಿಸಿ ಆಚರಿಸಲಾಗುವುದು ಎಂದರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದಾದ್ಯಂತ ಆಚರಿಸಲಾಗುತ್ತದೆ, ಭಾರತೀಯ ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಸ್ಮರಿಸಲು ದೇಶಾದ್ಯಂತ ಕಾರ್ಯಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮ ಎಲ್ಲರಲ್ಲೂ ದೇಶಾಭಿಮಾನ ಮೂಡಿಸಲಿದೆ ಮಾತ್ರವಲ್ಲ, ಸುರಕ್ಷತೆಗೆ ಪ್ರೇರೇಪಿಸಲಿದೆ. ಜಮ್ಮು-ಕಾಶ್ಮೀರದ ಕಾರ್ಗಿಲ್‌ನ್ನು ಮರಳಿ ವಶಕ್ಕೆ ಪಡೆದ ಭಾರತೀಯ ಸೈನಿಕರ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವುದರ ದ್ಯೋತಕವಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಡಾ. ಹಿರೇಮಠ್ ಸೇರಿದಂತೆ ಅಸಂಖ್ಯಾತ ಮಾಜಿ ಯೋಧರು, ಹುತಾತ್ಮ ಯೋಧರ ಕುಟುಂಬದ ಸದಸ್ಯರು, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೈಕ್ ರ್‍ಯಾಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಿಂದ ಹೊರಟ ರ್‍ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಸೈನಿಕ ಪಾರ್ಕ್‌ನಲ್ಲಿ ಸಂಪನ್ನಗೊಂಡಿತು.