ವಿಜೃಂಭಣೆ ಗೂಳಿಹಟ್ಟಿ ಕರಿಯಮ್ಮ ರಥೋತ್ಸವ

| Published : Apr 29 2024, 01:43 AM IST / Updated: Apr 29 2024, 01:44 AM IST

ಸಾರಾಂಶ

ತಾಲೂಕಿನ ಗೂಳಿಹಟ್ಟಿ ಗ್ರಾಮದ ಕರಿಯಮ್ಮ ದೇವಿ ರಥೋತ್ಸವವೂ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಕರಿಯಮ್ಮ ದೇವಿ ರಥೋತ್ಸವವನ್ನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮದ ಭಕ್ತರು ಬೆಳಗ್ಗೆಯಿಂದಲೇ ಜಾತ್ರೆಗಾಗಿ ಬಂದಿದ್ದು, ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಹೊಸದುರ್ಗ: ತಾಲೂಕಿನ ಗೂಳಿಹಟ್ಟಿ ಗ್ರಾಮದ ಕರಿಯಮ್ಮ ದೇವಿ ರಥೋತ್ಸವವೂ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕರಿಯಮ್ಮ ದೇವಿ ರಥೋತ್ಸವವನ್ನ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಗ್ರಾಮದ ಭಕ್ತರು ಬೆಳಗ್ಗೆಯಿಂದಲೇ ಜಾತ್ರೆಗಾಗಿ ಬಂದಿದ್ದು, ಬಿಡುವಿಲ್ಲದಂತೆ ಪೂಜಾ ಕಾರ್ಯಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಗ್ರಾಮದ ತೇರಿನ ಮನೆಯ ಬೀದಿಯಲ್ಲಿ ರಥೋತ್ಸವ ನೆಡೆದಿದ್ದು, ಈ ರಥೋತ್ಸವಕ್ಕಾಗಿ ದೇವಿಯ ರಥವನ್ನು ವಿವಿಧ ಹೂಗಳಿಂದ ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆಗಳಿಂದ ಶೃಂಗಾರಗೊಳಿಸಿ ರಥದ ಸುತ್ತಲೂ ಬಾವುಟಗಳನ್ನು ಕಟ್ಟಲಾಗಿತ್ತು.

ರಥದ ಮೇಲೆ ತಾಯಿ ಕರಿಯಮ್ಮ ಮತ್ತು ಮುತ್ತಿನ ಮುಡಿಯಮ್ಮ ದೇವಿಯವರನ್ನು ಬಂಗಾರದ ಆಭರಣಗಳು ಮತ್ತು ಸುಗಂಧದ ಹೂಗಳಿಂದ ಶೃಂಗಾರಗೊಳಿಸಿ ಪ್ರತಿಷ್ಠಾಪಿಸಲಾಗಿತ್ತು. ವಿವಿಧ ಧಾರ್ಮಿಕ ವಾದ್ಯಗಳೊಂದಿಗೆ ಸೋಮಣ್ಣ ಕುಣಿತದ ಆಜ್ಞೆ ಮೇರೆಗೆ ತೇರುಮನೆಯಿಂದ ದೊಡ್ಡಮ್ಮ ದೇವಿಯ ಸನ್ನಿಧಿವರೆಗೆ ಭಕ್ತರು ಎಳೆಯುವುದರ ಮೂಲಕ ಕರಿಯಮ್ಮ ದೇವಿಯ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ.

ರಥಕ್ಕೆ ಬಾಳೆಹಣ್ಣು, ರಾಗಿ, ಜೋಳ, ದವಸ ಧಾನ್ಯಗಳು ಮಂಡಕ್ಕಿ, ಚಿಲ್ಲರೆ ನಾಣ್ಯಗಳನ್ನು ತೂರಿ ಇಷ್ಟಾರ್ಥವನ್ನು ಈಡೇರಿಸುವಂತೆ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತ, ನಾಡಿನ ಸುಭೀಕ್ಷೆ ಹಾಗೂ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿದರು.

ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏ.23ರಿಂದ ಜಾತ್ರೆಗೆ ಚಾಲನೆ ನೀಡಲಾಗಿದ್ದು, ಏ.23ರಂದು ಮದುವಣಿಗೆ ಶಾಸ್ತ್ರ, 24ರಂದು ಧ್ವಜಾರೋಹಣ, ಹೊಳೆಪೂಜೆ, ದೊಡ್ಡಬಾನೋತ್ಸವ, ಬೇವಿನ ಸೀರೆ ಮತ್ತು ಶಾಸ್ತ್ರದಂಡ, 25ರಂದು ಧೂಳೋತ್ಸವ, 26ರಂದು ಗಜೋತ್ಸವ, ಭಂಡಾರದ ತಟ್ಟೆ, ಎನ್.ಜಿ.ಹಳ್ಳಿಯ ಮುತ್ತಿನ ಮುಡಿಯಮ್ಮ ದೇವಿಯ ಆಗಮನ ಮತ್ತು ಕೂಡು ಭೇಟಿ ಉತ್ಸವ ನಡೆದವು.

ಈ ಜಾತ್ರೆಗೆ ಆಗಮಿಸಿದ ಭಕ್ತರಿಗಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದು, ವಿವಿಧ ಸಿಹಿ ಖಾದ್ಯಗಳನ್ನ ಸ್ವೀಕರಿಸಿ ಸಂತೃಪ್ತರಾಗಿ ತಮ್ಮ ಮನೆಗಳತ್ತ ಮುಖ ಮಾಡಿದರು.