ಸಾರಾಂಶ
ಕರಿಘಟ್ಟಕ್ಕೆ ಅನೇಕ ಜನರು ಮೋಜು ಮಸ್ತಿ ಮಾಡಲು ಬರುತ್ತಾರೆ. ಇಲ್ಲಿಗೆ ಬಂದು ಮದ್ಯ ಸೇವನೆ ಮಾಡುವುದಾಗಲಿ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದಾಗಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರವಾಸಿ ತಾಣ ಕರಿಘಟ್ಟವನ್ನು ಕಿಡಿಗೇಡಿಗಳಿಂದ ರಕ್ಷಿಸುವ ಉದ್ದೇಶದಿಂದ ಪಟ್ಟಣದ ಟೌನ್ ಪೊಲೀಸ್ ಠಾಣೆಯಿಂದ ಕರಿಘಟ್ಟದಲ್ಲಿ ನಿಷೇಧಿತ ಪ್ರದೇಶವೆಂದು ಸೂಚನಾ ಫಲಕ ಅಳವಡಿಸುವ ಮೂಲಕ ಮದ್ಯಪಾನ ಸೇವನೆ, ಪ್ಲಾಸ್ಟಿಕ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ.ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಟೌನ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಸೂಚನಾ ಫಲಕ ಅಳವಡಿಸಿ ಬಳಿಕ ಮಾತನಾಡಿ, ಕರಿಘಟ್ಟಕ್ಕೆ ಅನೇಕ ಜನರು ಮೋಜು ಮಸ್ತಿ ಮಾಡಲು ಬರುತ್ತಾರೆ. ಇಲ್ಲಿಗೆ ಬಂದು ಮದ್ಯ ಸೇವನೆ ಮಾಡುವುದಾಗಲಿ, ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದಾಗಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಕರಿಘಟ್ಟದಲ್ಲಿ 3 ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪರಿಸರ ರಮೇಶ್ ಅವರು ಕರಿಘಟ್ಟದಲ್ಲಿ ವಿದ್ಯಾರ್ಥಿಗಳಿಂದ ಗಿಡಗಳನ್ನು ನೆಡುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಉಪ ಲೋಕಾಯುಕ್ತರು ಆಗಮಿಸಿದ ಸಂದರ್ಭದಲ್ಲಿ ಕರಿಘಟ್ಟಕ್ಕೆ ಬೆಂಕಿ ಹಾಕುವವರು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ ಎಂದರು.ಕರಿಘಟ್ಟ ಇರುವುದು ಸುಂದರ ಪರಿಸರವನ್ನು ಸವಿಯುವುದಕ್ಕೆ ಹೊರತು ಪ್ರಕೃತಿಯನ್ನು ನಾಶ ಪಡಿಸುವುದಲ್ಲ. ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರು ಇದನ್ನು ಅರಿಯಬೇಕು ಎಂದರು.