ಅರಸೀಕೆರೆಯಲ್ಲಿ ಕರಿಯಮ್ಮ ದೇವಿ ಮಡಿಲಕ್ಕಿ ಉತ್ಸವ

| Published : Apr 15 2024, 01:21 AM IST

ಸಾರಾಂಶ

ಅರಸೀಕೆರೆ ಗ್ರಾಮದೇವತೆ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಗ್ರಾಮದೇವತೆಯ ಮಡಲಕ್ಕಿ ಉತ್ಸವ ನಡೆಯಿತು.

ಗ್ರಾಮದೇವತೆ ಜಾತ್ರೆಗೆ ಚಾಲನೆ । ರಸ್ತೆ ಉದ್ದಕ್ಕೂ ದೇವಿ ಪೂಜೆ

ಅರಸೀಕೆರೆ: ನಗರದ ಗ್ರಾಮದೇವತೆ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಗ್ರಾಮದೇವತೆಯ ಮಡಲಕ್ಕಿ ಉತ್ಸವ ನಡೆಯಿತು.

ಜಾತ್ರಾ ಮಹೋತ್ಸವಕ್ಕೂ ಮುನ್ನ ಗ್ರಾಮದೇವತೆ ಕರಿಯಮ್ಮ ದೇವಿಯು ಮಡಿಲಕ್ಕಿಗೆ ಬರುವ ಸಂಪ್ರದಾಯ ಆಚರಿಸಲಾಯಿತು. ನಗರದ ಜನತೆ ಗ್ರಾಮದೇವತೆಯನ್ನು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡು ಪೂಜೆ-ಪುನಸ್ಕಾರ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಮನೆಗೆ ಬಂದ ಅಮ್ಮನವರಿಗೆ ಅರಿಶಿನ ಕುಂಕುಮವಿಟ್ಟು ಬಳೆ ಹಾಗೂ ಸೀರೆ ತೊಡಿಸಿ ಸಂಭ್ರಮಿಸಲಾಯಿತು.

ಅಮ್ಮನವರ ಮಡಿಲಕ್ಕಿ ಉತ್ಸವ ಸಾಗುವ ಅಲ್ಲಲ್ಲಿ ಭಕ್ತರು ಸಾರ್ವಜನಿಕರಿಗೆ ಪಾನಕ ಫಲಹಾರವನ್ನು ವಿತರಿಸಿದರೆ ಗ್ರಾಮದೇವತೆ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ನೀರು ಹಾಕಿ ರಂಗೋಲಿ ಬಿಡಿಸಿ ಸ್ವಾಗತಿಸಿ ಬೀಳ್ಕೊಡುವ ಮೂಲಕ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕಿರಣ್ ಕುಮಾರ್ ಮಾತನಾಡಿ, ನಗರದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವವನ್ನು ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ದೇವಾಲಯದ ಸಂಪ್ರದಾಯದಂತೆ ಧಾರ್ಮಿಕ ಆಚರಣೆಗಳನ್ನು ಕೈಗೊಂಡಿದ್ದು ಜಾತ್ರಾ ಮಹೋತ್ಸವವು ಏ.29 ರಿಂದ ಮೇ 3 ರವರೆಗೆ ಜರುಗಲಿದೆ ಏ.29ರ ಬೆಳಗ್ಗೆ ಊರ ಒಳಗಿನ ಮಲ್ಲಿಗೆಮ್ಮ ದೇವಾಲಯದಲ್ಲಿ ರುದ್ರಾಭಿಷೇಕ, ಸಂಜೆ ಮೂರು ಕಳಸ ಮಠದ ಸಿದ್ದರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ಮತ್ತು ಮಲ್ಲಿಗೆಮ್ಮ ದೇವಿಯರ ಸಮ್ಮುಖದಲ್ಲಿ ಕೆಂಗಲ್ ಸಿದ್ದೇಶ್ವರ ದೇವಸ್ಥಾನದಲ್ಲಿ ನೂರೊಂದೆಡೆ ಸೇವೆ, ಏ.30 ಮಂಗಳವಾರ ರಾತ್ರಿ ಗ್ರಾಮದೇವತೆಯ ಮೂಲ ಸನ್ನಿಧಾನದಲ್ಲಿ ಬಾನ ನೈವೇದ್ಯ, ಮೇ 1 ರಂದು ಗಂಗಾ ಸ್ಥಾನ, ಮೇ.2 ರಂದು ಗುರುವಾರ ಗ್ರಾಮದೇವತೆಯ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮೇ 3 ರ ಸಂಜೆ ಮಲ್ಲಿಗೆಮ್ಮದೇವಿ ಸಮೇತ ಕರಿಯಮ್ಮ ದೇವಿಯ ಆನೆ ಅಂಬಾರಿ ಉತ್ಸವ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ ಎಂದು ತಿಳಿಸಿದರು.

ಅರಸೀಕೆರೆಯ ಗ್ರಾಮದೇವತೆ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಗ್ರಾಮದೇವತೆಯ ಮಡಲಕ್ಕಿ ಉತ್ಸವ ನಡೆಯಿತು.