ಸಾರಾಂಶ
ವಿಶ್ವವಿದ್ಯಾನಿಲಯದಿಂದ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಎಸ್.ಆರ್. ಆಚಾರ್ ಸ್ಮರಣಾರ್ಥ ದತ್ತಿನಿಧಿಯನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಯಶಸ್ಸು ಸಣ್ಣ ಸಣ್ಣ ಪ್ರಯತ್ನಗಳಿಂದ ಕೂಡಿದೆ. ನಮ್ಮ ವರ್ತನೆಗಳನ್ನು ಬದಲಾಯಿಸಿಕೊಂಡು ಅವಕಾಶಗಳನ್ನು ಉಪಯೋಗಿಸಿಕೊಂಡಾಗ ಮಾತ್ರ ಬದುಕಿನಲ್ಲಿ ಸಾಧಿಸುವುದು ಸಾಧ್ಯವಾಗುತ್ತದೆ. ಕಾಲೇಜು ಮುಗಿದ ಬಳಿಕವೂ ವಿದ್ಯಾರ್ಥಿಗಳು ಸ್ನೇಹವನ್ನು ಉಳಿಸಿಕೊಳ್ಳುವ ಸಂಪರ್ಕದಲ್ಲಿರುವ ಪ್ರಯತ್ನವನ್ನು ಮಾಡಬೇಕು ಎಂದು ಪೂರ್ವ ವಿದ್ಯಾರ್ಥಿ, ಸಿಎ ಅಶೋಕ್ ಶೆಟ್ಟಿ ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನ ೫೯ನೇ ವರ್ಷದ ಹಳೆ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆತ್ಮವಿಶ್ವಾಸವೇ ವಿದ್ಯಾರ್ಥಿಯ ಪ್ರಬಲ ಆಸ್ತಿ. ಅದನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಕಾಲೇಜಿನ ಪೂರ್ವ ವಿದ್ಯಾರ್ಥಿಗಳು ಕಾಲೇಜಿಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಅವರ ಒಳ್ಳೆಯತನದ ಹೃದಯವಂತಿಕೆ ಭುವನೇಂದ್ರ ಕಾಲೇಜಿಗೆ ಬಹುದೊಡ್ಡ ಆಸ್ತಿಯಾಗಿದೆ. ವಿದ್ಯಾರ್ಥಿಗಳು ಮತ್ತು ಕಾಲೇಜಿನ ನಡುವಿನ ಸಂಬಂಧ ಸದಾ ಹಸಿರಾಗಿರುವುಂಥದ್ದು ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ. ಮಾತನಾಡಿ, ಯಾವುದೇ ಸಂಸ್ಥೆಯ ಏಳಿಗೆಗೆ ಹಳೆವಿದ್ಯಾರ್ಥಿ ಸಂಘದ ಕೊಡುಗೆ ಮಹತ್ವಪೂರ್ಣವಾದದ್ದು. ಪ್ರಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಎ ಶಿವಾನಂದ ಪೈ ಬಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಭಾವನೆಗಳನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದು ಸಿಗುವಂಥದ್ದು ಶಿಕ್ಷಕರೊಂದಿಗೆ ಪಾಠ ಕೇಳಿದಾಗ ಮಾತ್ರ ಎಂದರು.
ಪೂರ್ವ ವಿದ್ಯಾರ್ಥಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ಧನ ಇಡ್ಯಾ ಸ್ವಾಗತಿಸಿದರು. ಶಂಕರ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೌಜನ್ಯ ಉಪಾಧ್ಯಾಯ ವಂದಿಸಿದರು.ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಿಂದ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಎಸ್.ಆರ್. ಆಚಾರ್ ಸ್ಮರಣಾರ್ಥ ದತ್ತಿನಿಧಿಯನ್ನು ವಿತರಿಸಲಾಯಿತು.