ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಿರೋಧಿಸಿ ಕಾರ್ಕಳ ಬಿಜೆಪಿ ಪ್ರತಿಭಟನೆ

| Published : Mar 27 2025, 01:04 AM IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಿರೋಧಿಸಿ ಕಾರ್ಕಳ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾರ್ಕಳ ತಾಲೂಕು ಆಫೀಸ್‌ ಸರ್ಕಲ್ ಬಳಿ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾರ್ಕಳ ತಾಲೂಕು ಆಫೀಸ್‌ ಸರ್ಕಲ್ ಬಳಿ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿತು. ಕಾರ್ಕಳ ಬಿಜೆಪಿಯ ಮಂಡಲಾದ್ಯಕ್ಷ ನವೀನ್ ನಾಯಕ್ ನೇತೃತ್ವ ವಹಿಸಿ, ಪ್ರಾಸ್ತಾವಿಕ ಮಾತನಾಡಿ, ಸಂವಿಧಾನದ ಘನತೆ ಎತ್ತಿ ಹಿಡಿಯಬೇಕಾದವರಿಂದ ಸಂವಿಧಾನಕ್ಕೆ ಅಪಮಾನವಾಗಿದೆ ಎಂದರು.

ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಅಂಬೇಡ್ಕರ್ ಹೆಸರು ಬಳಸುತ್ತಿದ್ದು ಅವರಿಗೆ ಯಾವುದೇ ಗೌರವ ನೀಡಿಲ್ಲ. ಷಹಭಾನು ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನೂರ್ಜಿತಗೊಳಿಸಲಾಯಿತು. ಅಂಬೇಡ್ಕರ್ ಸಂಸತ್ ಪ್ರವೇಶಿಸಲು ಕಾಂಗ್ರೆಸ್ಸ್ ಅಡ್ಡಗಾಲು ಹಾಕಿತ್ತು ಎಂದು ಆರೋಪಿಸಿದರು.

ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಉಪಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್‌, ಜಯರಾಮ್‌ ಸಾಲ್ಯಾನ್‌, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್‌ ಬೋಳ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್‌ ಶೆಟ್ಟಿ, ತಾಲೂಕು ಯುವಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ, ಪ್ರಕಾಶ್‌ ರಾವ್‌, ಸುಧಾಕರ್‌ ಹೆಗ್ಡೆ ಹೆಬ್ರಿ, ಲಕ್ಷ್ಮೀನಾರಾಯಣ್‌ ಹೆಬ್ರಿ, ಸಮೃದ್ಧಿ ಪ್ರಕಾಶ್‌, ಯೋಗಿಶ್‌ ನಾಯಕ್‌, ಪ್ರಸಾದ್ ಐಸಿರಾ ಹಾಗೂ ಪುರಸಭಾ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.