ಕಾರ್ಕಳ, ಹೆಬ್ರಿ ರಸ್ತೆಗಳು ಧೂಳುಮಯ!

| Published : Mar 26 2024, 01:07 AM IST

ಸಾರಾಂಶ

ಕಾರ್ಕಳ ತಾಲೂಕು ಹಾಗೂ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಶಿವಪುರ, ಪಾಡಿಗಾರ ಹಾಗೂ ಮುಳ್ಳುಗುಡ್ಡೆ, ಬಿಕರ್ನಕಟ್ಟೆ, ಸಾಣೂರು ಮುಖ್ಯರಸ್ತೆ, ಬೈಪಾಸ್, ಮಾಳ ರಸ್ತೆಯಲ್ಲಿ ಸಾಗುವುದೇ ಕಷ್ಟವಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ಆದರೆ ರಸ್ತೆಯುದ್ದಕ್ಕೂ ಧೂಳಿನಿಂದ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯ ಮನೆಗಳಿಗೆ ಧೂಳು ಸೇರಿಕೊಂಡು ತೀವ್ರ ಸಮಸ್ಯೆಯಾಗುತ್ತಿದೆ.ಕಾರ್ಕಳ ತಾಲೂಕು ಹಾಗೂ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಶಿವಪುರ, ಪಾಡಿಗಾರ ಹಾಗೂ ಮುಳ್ಳುಗುಡ್ಡೆ, ಬಿಕರ್ನಕಟ್ಟೆ, ಸಾಣೂರು ಮುಖ್ಯರಸ್ತೆ, ಬೈಪಾಸ್, ಮಾಳ ರಸ್ತೆಯಲ್ಲಿ ಸಾಗುವುದೇ ಕಷ್ಟವಾಗಿದೆ.* ಅನಾರೋಗ್ಯ ಭೀತಿ: ರಸ್ತೆ ಕಾಮಗಾರಿಯಿಂದಾಗಿ ಉಂಟಾದ ಧೂಳಿನಿಂದಾಗಿ ಕಾರ್ಕಳ ತಾಲೂಕಿನ ಮಿಯ್ಯಾರು, ಜೋಡುಕಟ್ಟೆ ಕಡಾರಿ, ಬಜಗೋಳಿ, ಕುಂಟಿಬೈಲು, ಹೆಬ್ರಿ ತಾಲೂಕಿನ ಪಾಡಿಗಾರ, ಶಿವಪುರ, ಉಡುಪಿ ತಾಲೂಕಿನ ಅತ್ರಾಡಿ, ಹಿರಿಯಡ್ಕ, ಪೆರ್ಡೂರು ಪರಿಸರದ ಮನೆ ಮಂದಿಗೆ ಹಿರಿಯರಿಗೆ ಕೆಮ್ಮಿನ ಸಮಸ್ಯೆ, ಚಿಕ್ಕ ಮಕ್ಕಳಿಗೆ ಅಲರ್ಜಿ ಸಮಸ್ಯೆಗಳು ಉಂಟಾಗಿವೆ.* ನೀರಿನ ಕೊರತೆ: ರಸ್ತೆ ನಿರ್ಮಾಣ ಕಾರ್ಯದಲ್ಲಿ ಧೂಳು ಏಳದಂತೆ ನೀರಿನ ಪೂರೈಕೆಗಾಗಿ ನೀರಿನ ಸಮಸ್ಯೆ ಎದುರಾಗಿದೆ. ಬಿರು ಬಿಸಿಲಿನಿಂದ ಕುಡಿಯುವ ನೀರಿನ ಕೊರತೆಯುಂಟಾಗಿದ್ದು, ಅದೇ ರೀತಿ ರಸ್ತೆ ನಿರ್ಮಾಣಕ್ಕೂ ಕೂಡ ಸೂಕ್ತ ನೀರಿನ ಲಭ್ಯತೆ ಇಲ್ಲ. ಲಭ್ಯ ಇರುವ ನೀರನ್ನು ಕಾಮಗಾರಿ ವೇಳೆ ರಸ್ತೆಗೆ ಹಾಯಿಸಿದರೂ ಬಿಸಿಲಿಗೆ ನೀರು ಬೇಗನೆ ಒಣಗಿ ಮತ್ತೆ ಧೂಳಿನ ಸಮಸ್ಯೆ ಕಾಡುತ್ತಿದೆ. ಗುತ್ತಿಗೆದಾರರು ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.

* ಬೈಕ್ ಸವಾರರಿಗೆ ತೊಂದರೆ: ರಸ್ತೆ ಕಾಮಗಾರಿ ವೇಳೆ ವೇಗವಾಗಿ ಬರುವ ಬಸ್‌ಗಳು, ಟಿಪ್ಪರ್‌ಗಳು, ಮಲ್ಟಿ ಎಕ್ಸೆಲ್ ವಾಹನಗಳು ವೇಗವಾಗಿ ಸಾಗುವಾಗ ಧೂಳಿನಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

* ಪಾದಚಾರಿಗಳಿಗೂ ತೊಂದರೆ: ರಸ್ತೆ ಕಾಮಗಾರಿಯಿಂದಾಗಿ ನಡೆದುಕೊಂಡು ಸಾಗಲು ಕಷ್ಟ. ರಸ್ತೆ ಬದಿ ಬಸ್‌ಗಾಗಿ ನಿಲ್ಲಲು ಕಷ್ಟವಾಗಿದೆ. ವಿದ್ಯಾರ್ಥಿಗಳು, ನಿತ್ಯ ಸಾಗುವ ಕೂಲಿಕಾರ್ಮಿಕರು, ಉದ್ಯೋಗಿಗಳಿಗೆ ತೀವ್ರವಾದ ತೊಂದರೆಯುಂಟಾಗುತ್ತಿದೆ.-----

ಉದ್ಯೋಗಕ್ಕೆ ಹೋಗಲು ಸ್ಕೂಟಿಯಲ್ಲಿ ಸಂಚರಿಸುವುದೇ ತ್ರಾಸದಾಯಕವಾಗಿದೆ. ಬಟ್ಟೆಗಳ ಬಣ್ಣ ಬದಲಾಗುತ್ತದೆ. ಸಾಗುವುದೇ ಕಷ್ಟ. ನಮ್ಮ ನಿತ್ಯದ ಗೋಳು ಕೇಳುವವರ್ಯಾರು?

। ಸುಕೃತ ಎಸ್. ಪೈ ಕಾರ್ಕಳ, ನಿತ್ಯ ಪ್ರಯಾಣಿಕರು

---------------ಧೂಳಿನಿಂದಾಗಿ ಅಲರ್ಜಿ , ಕೆಮ್ಮು ಉಂಟಾಗಿದೆ. ಅನೇಕರು ಅನಾರೋಗ್ಯ ಪೀಡಿತರಾಗಿದ್ದಾರೆ. ರಸ್ತೆ ಕಾಮಗಾರಿ ಒಂದೆಡೆಯಾದರೆ ಬಿಸಿಲಿನ ತಾಪ ಏರಿಕೆ ಇನ್ನೊಂದೆಡೆ.। ಮೊಹಮ್ಮದ್ ಶಮೀರ್-----------

ಬಿಸಿಲಿನ ತಾಪ ಹೆಚ್ಚಾದಂತೆ ಸನ್‌ಸ್ಟ್ರೋಕ್, ಚರ್ಮದ ಅಲರ್ಜಿ ಸಮಸ್ಯೆಗಳು ಎದುರಾಗುತ್ತವೆ. ಹಿರಿಯರು ಬಿಸಿಲಿನ ತಾಪ ಹೆಚ್ಚಾಗಿರುವ ಸಮಯದಲ್ಲಿ ಹೊರಗೆ ಹೋಗಬಾರದು. ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯಬೇಕು.। ಡಾ. ಅನುಷಾ, ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕ್ಷೇಮ‌ಕೇಂದ್ರ ಅಜೆಕಾರು