ಕಾರ್ಕಳ, ಹೆಬ್ರಿ ತಾಲೂಕಲ್ಲಿ ಶಾಲೆ ಆರಂಭಕ್ಕೆ ಭರದ ಸಿದ್ಧತೆ

| Published : May 29 2024, 12:51 AM IST

ಸಾರಾಂಶ

ಜೂನ್‌ 1ರಂದು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ತಿನಿಸುಗಳನ್ನು ತಯಾರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಪ್ರಾರಂಭೋತ್ಸವ ಆಚರಿಸಲಾಗುತ್ತದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ, ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ ಮೇ 29ರಂದು ಶಾಲೆಗಳು ಆರಂಭವಾಗಲಿವೆ. ಎರಡು ದಿನ ಶಿಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಕೆಲಸಗಾರರನ್ನು ನೇಮಿಸಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂನ್‌ 1ರಂದು ಪ್ರಾರಂಭೋತ್ಸವ:

ಕಾರ್ಕಳ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಶಾಲೆಗಳು, ಪ್ರಾಥಮಿಕ, ಹೈಸ್ಕೂಲ್ ಸೇರಿದಂತೆ ಒಟ್ಟು 238 ಶಾಲೆಗಳಿವೆ. ಜೂನ್‌ 1ರಂದು ವಿದ್ಯಾರ್ಥಿಗಳು ಶಾಲೆಗೆ ಮರಳಲಿದ್ದಾರೆ. ಜೂನ್‌ 1ರಂದು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ತಿನಿಸುಗಳನ್ನು ತಯಾರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಪ್ರಾರಂಭೋತ್ಸವ ಆಚರಿಸಲಾಗುತ್ತದೆ.ಕಳೆದ ಬಾರಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವಿದ್ಯಾರ್ಥಿಗಳ ಕೊರತೆಯಿಂದ ಮೂರು ಸರ್ಕಾರಿ ಶಾಲೆಗಳು ಮುಚ್ಚಿದೆ. ಕಾರ್ಕಳ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬರಾಡಿ ಬೋಳ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಸೂಡ ಮತ್ತು ಹೆಬ್ರಿ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗಾರುಗುಡ್ಡೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿವೆ.

* ಮಳೆಯಿಂದ ಹಾನಿ:

ಮುಂಗಾರು ಪೂರ್ವ ಸುರಿದ ಭಾರಿ ಗಾಳಿ ಮಳೆಯಿಂದ ಹೆಬ್ರಿ ತಾಲೂಕಿನ ಚಾರ ಗ್ರಾಮದ ವಂಡಾರಬೆಟ್ಟು ಶಾಲೆಯ ಛಾವಣಿಗೆ ತೀವ್ರ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯಗಳು ಭರದಿಂದ ಸಾಗುತ್ತಿದೆ. ಕಾರ್ಕಳ ತಾಲೂಕಿನ ಬಸ್ರಿಬೈಲೂರು ಶಾಲೆಯ ಗೋಡೆ ಭಾರಿ ಮಳೆಗೆ ಕುಸಿದಿದೆ. ಇದನ್ನೂ ಸರಿಪಡಿಸುವ ಕಾರ್ಯಗಳು ನಡೆಯುತ್ತಿದೆ.

* ಖಾಲಿ ಹುದ್ದೆಗಳದ್ದೇ ಸವಾಲು:

ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಾಲೆಯಲ್ಲಿ 1 ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆ ಖಾಲಿ ಇದ್ದು, ಹೈಸ್ಕೂಲ್‌ನಲ್ಲಿ 12 ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳು, ಹೈಸ್ಕೂಲ್‌ನಲ್ಲಿ ಸಹಾಯಕ ಶಿಕ್ಷಕರ 56 ಹುದ್ದೆಗಳು, ಪ್ರೈಮರಿ ಶಾಲೆಗಳಲ್ಲಿ ಒಟ್ಟು 111 ಹುದ್ದೆಗಳು ಖಾಲಿ ಇವೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.* ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ:

ಕಾರ್ಕಳ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.

2021 -22ರಲ್ಲಿ 12602 ವಿದ್ಯಾರ್ಥಿಗಳು ಇದ್ದು, 2022- 23ರಲ್ಲಿ 12542 ಹಾಗೂ 2023- 24ರಲ್ಲಿ 12887 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಹಾಗೆಯೇ ಖಾಸಗಿ ಶಾಲೆಗಳಲ್ಲಿ 2021-22ರಲ್ಲಿ 12206 ಮತ್ತು 2022-23ರಲ್ಲಿ 12383, 2023-24ರಲ್ಲಿ 12418 ವಿದ್ಯಾರ್ಥಿಗಳಿದ್ದಾರೆ. ಅನುದಾನಿತ ಶಾಲೆಗಳಲ್ಲಿ 2021-22ರಲ್ಲಿ 3618, 2022-23ರಲ್ಲಿ 3671 ಹಾಗೂ 2023-24ರಲ್ಲಿ 3417ರಷ್ಟು ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.* ಸೇರ್ಪಡೆಯಲ್ಲಿ ಕುಸಿತ ಭೀತಿ:

2023ರಲ್ಲಿ ಒಂದನೇ ತರಗತಿಗೆ ಒಟ್ಟು 2559 ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದರು. 2024-25ರ ಸಾಲಿನಲ್ಲಿ ಪ್ರವೇಶಕ್ಕೆ ಕನಿಷ್ಠ ಆರು ವರ್ಷ ವಯಸ್ಸಿನ ಮಿತಿ ಇದ್ದು, ಇದರಿಂದ ಒಂದನೇ ತರಗತಿಗೆ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

* ಹೆಚ್ಚಿದ ಪುಸ್ತಕ ಮಾರಾಟ:

ಕಾರ್ಕಳ, ಹೆಬ್ರಿ ಸೇರಿದಂತೆ ಎಲ್ಲೆಡೆಗಳಲ್ಲಿ ಪುಸ್ತಕ ಅಂಗಡಿಗಳಲ್ಲಿ ಪುಸ್ತಕ ಮಾರಾಟ ಹೆಚ್ಚಿದೆ. ಪೋಷಕರು ಅಂಗಡಿಗಳಿಗೆ ತೆರಳುವುದು ಹೆಚ್ಚಿದೆ. ಅದರಲ್ಲೂ ಕಾರ್ಕಳದಲ್ಲಿರುವ ಬೃಹತ್ ಪುಸ್ತಕ ಮಳಿಗೆಗಳಲ್ಲಿ ಒಂದಾದ ಜೋಡುರಸ್ತೆಯಲ್ಲಿನ ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಕಳೆದ 25 ದಿನಗಳಿಂದ ವಿದ್ಯಾರ್ಥಿಗಳು, ಪೋಷಕರು ಪಠ್ಯ ಪುಸ್ತಕಗಳ ಜೊತೆಗೆ ಸಾಹಿತ್ಯ, ಪ್ರಬಂಧ ಸೇರಿದಂತೆ ಕೊಡೆ, ರೈನ್ ಕೋಟ್, ಬ್ಯಾಗ್‌ಗಳನ್ನು ಖರೀದಿಸುತ್ತಿದ್ದಾರೆ.-------

ಶಾಲೆಗಳಿಗೆ ಜೂನ್‌ 1ರಿಂದ ವಿದ್ಯಾರ್ಥಿಗಳು ಆಗಮಿಸಲಿದ್ದು, ಪೋಷಕರು, ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು, ಎಸ್‌ಡಿಎಂಸಿ ಸಮಿತಿ ಸೇರಿಕೊಂಡು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಪ್ರಾರಂಭೋತ್ಸವ ಆಚರಿಸುವರು.

। ಲೋಕೇಶ್ ಬಿ.ವಿ., ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಕಳ

----------

ಕಳೆದ 25 ದಿನಗಳಿಂದ ಪಠ್ಯ ಪುಸ್ತಕಗಳ ಜೊತೆ ಸಾಹಿತ್ಯ, ಪ್ರಬಂಧ ಪುಸ್ತಕಗಳ ಮಾರಾಟವು ಹೆಚ್ಚಿದೆ. ಪೋಷಕರು, ವಿದ್ಯಾರ್ಥಿಗಳು ಪುಸ್ತಕ ಮನೆಗೆ ಆಗಮಿಸಿ ಪುಸ್ತಕ ಕೊಂಡುಕೊಳ್ಳುವಲ್ಲಿ ನಿರತರಾಗಿದ್ದಾರೆ.

। ಅಶ್ವಥ್ ಎಸ್.ಎಲ್., ಕ್ರಿಯೇಟಿವ್ ಪುಸ್ತಕ ಮನೆ ಸಂಸ್ಥಾಪಕರು