ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಗೊಮ್ಮಟ ಬೆಟ್ಟ, ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಮತ್ತು ವರಂಗ ಬಸದಿ ಬಳಿ ಸಭಾಭವನಗಳ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಕಾರ್ಕಳ: ಜೈನ ಸಮುದಾಯದ ಐತಿಹಾಸಿಕ ಪರಂಪರೆ ಹೊತ್ತು ನಿಂತಿರುವ ಕಾರ್ಕಳದಲ್ಲಿ 2027ರ ಜನವರಿಯಲ್ಲಿ ಜರುಗಲಿರುವ ವಿಶ್ವವಿಖ್ಯಾತ ಶ್ರೀ ಗೊಮ್ಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ.ಕಾರ್ಕಳ ವಿಧಾನಸಭಾ ಕ್ಷೇತ್ರವು ಗೊಮ್ಮಟ ಬೆಟ್ಟದ ಏಕಶಿಲಾ ಪ್ರತಿಮೆ, ಚತುರ್ಮುಖ ಬಸದಿ, ಆನೆಕೆರೆ ಮತ್ತು ವರಂಗ ಚತುರ್ಮುಖ ಕೆರೆ ಬಸದಿ, ನಲ್ಲೂರು ಶ್ರೀ ಕೂಷ್ಮಾಂಡಿನಿ ಜೈನ ಬಸದಿ ಸೇರಿದಂತೆ ಅನೇಕ ಪುಣ್ಯ ತಾಣಗಳಿಂದ ಪ್ರಸಿದ್ಧವಾಗಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಈ ಕ್ಷೇತ್ರಕ್ಕೆ ವರ್ಷಪೂರ್ತಿ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರ ಓಡಾಟ ಜೋರಾಗಿರುತ್ತದೆ.12 ವರ್ಷಗಳಿಗೊಮ್ಮೆ ನಡೆಯುವ ಈ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ನಗರಾಭಿವೃದ್ಧಿ ಯೋಜನೆಗಳು ಗತಿಯಲ್ಲಿವೆ. ಮುಖ್ಯ ರಸ್ತೆಗಳ ದುರಸ್ತಿ, ಒಳಚರಂಡಿ ದುರಸ್ತಿ, ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ, ಯಾತ್ರಾರ್ಥಿಗಳ ತಂಗುದಾಣ, ಸುಸಜ್ಜಿತ ಯಾತ್ರಿ ನಿವಾಸ ಮತ್ತು ಅನ್ನಛತ್ರಗಳ ವ್ಯವಸ್ಥೆಯತ್ತ ತಯಾರಿ ನಡೆಯುತ್ತಿದೆ.
ವಿ. ಸುನಿಲ್ ಕುಮಾರ್ ಅವರು ಗೊಮ್ಮಟ ಬೆಟ್ಟ, ನಲ್ಲೂರು ಕೂಷ್ಮಾಂಡಿನಿ ಜೈನ ಬಸದಿ ಮತ್ತು ವರಂಗ ಬಸದಿ ಬಳಿ ಸಭಾಭವನಗಳ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ ಪೂರ್ವಭಾವಿ ತಯಾರಿಗಳು ವೇಗವಾಗಿ ಮುಂದುವರಿಯುತ್ತಿವೆ ಎಂದು ಅವರು ಹೇಳಿದರು.