ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ

| Published : Nov 19 2025, 01:45 AM IST

ಕಾರ್ಕಳ ಪುರಸಭೆ: ರಸ್ತೆಗಳ ತುರ್ತು ದುರಸ್ತಿಗೆ ಶಾಸಕ ಸುನಿಲ್‌ಕುಮಾರ್‌ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಸುನಿಲ್‌ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಶಾಸಕ ಸುನಿಲ್‌ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಹಾಲಿ ಇರುವ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಪೈಪ್ ಲೈನ್ ಅಳವಡಿಕೆಗಾಗಿ ಕಾರ್ಕಳ ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಅಗೆದು ಪೈಪ್ ಲೈನ್ ಕಾಮಗಾರಿ ನಡೆಸಲಾಗಿತ್ತು. ಈ ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದ ಕಾರ್ಕಳ ಪೇಟೆಯ ಅನಂತಶಯನ ತಳ್ಳಾರು ರಸ್ತೆ, ಮುಖ್ಯ ರಸ್ತೆ, ಕೋರ್ಟ್ ರಸ್ತೆ, ಬಂಡಿಮಠ, ಪೆರ್ವಾಜೆಯ ರಸ್ತೆಗಳು ಸೇರಿದಂತೆ ಪ್ರಮುಖ ಭಾಗಗಳಲ್ಲಿ ರಸ್ತೆ ಹಾಳಾಗಿದ್ದು ಸಾರ್ವಜನಿಕ ಸಂಚಾರಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.

ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮುಗಿದಿರುವುದರಿಂದ ಕೂಡಲೇ ಇಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅವರಲ್ಲಿ ಒತ್ತಾಯಿಸಲಾಯಿತು.ಈ ಬಗ್ಗೆ ಮಾಹಿತಿ ನೀಡಿದ ಇಲಾಖಾ ಅಧಿಕಾರಿಗಳು ಪ್ರಸ್ತುತ ರಾಮಸಮುದ್ರ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಆ ಕಾಮಗಾರಿ ಮುಗಿದ ತಕ್ಷಣ ಅನಂತಶಯನ ತೆಳ್ಳಾರು ರಸ್ತೆ ಕಾಮಗಾರಿಯನ್ನು ಎರಡು ದಿನಗಳಲ್ಲಿ ಆರಂಭಿಸಲಾಗುವುದು ಹಾಗೂ ಉಳಿದ ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಆರಂಭಿಸಿ ಆದಷ್ಟು ಶೀಘ್ರವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಕೊಡಲಾಗುವುದು ಎಂದು ತಿಳಿಸಿದರು.ಉಡುಪಿ ಜಿಲ್ಲಾಧಿಕಾರಿ, ಕಾರ್ಕಳ ಪುರಸಭೆಯ ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.