ಸಾರಾಂಶ
ಸಾಹಿತ್ಯ ಸಂಘದ ವತಿಯಿಂದ ಎಸ್.ಎಲ್. ಭೈರಪ್ಪ ಮಾಸದ ನೆನಪು’ ಕಾರ್ಯಕ್ರಮ ಕಾರ್ಕಳದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಎಸ್.ಎಲ್. ಭೈರಪ್ಪ ಅವರು ಶ್ರೇಷ್ಠ ಕಾದಂಬರಿಕಾರರ ಪೈಕಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ಕನ್ನಡದ ಮೊದಲ ಪಾನ್ ಇಂಡಿಯಾ ಸಾಹಿತಿಯಾಗಿದ್ದಾರೆ ಎಂದು ವ್ಯಕ್ತಿತ್ವ ವಿಕಸನ ತಜ್ಞ ಹಾಗೂ ಲೇಖಕ ರಾಜೇಂದ್ರ ಭಟ್ ಕೆ ಹೇಳಿದರು.ಸಾಹಿತ್ಯ ಸಂಘದ ವತಿಯಿಂದ ನಡೆದ ‘ಎಸ್.ಎಲ್. ಭೈರಪ್ಪ ಮಾಸದ ನೆನಪು’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಭೈರಪ್ಪ ಅವರ ಕೃತಿಗಳಲ್ಲಿ ಅಲಂಕಾರಗಳಿಲ್ಲ, ಶಬ್ದಾಡಂಬರವಿಲ್ಲ. ಶುದ್ಧ ಸತ್ಯಪ್ರತಿಪಾದನೆ ಮಾತ್ರ ಇದೆ. ಅವರ ಆವರಣ, ಮಂದ್ರ, ಪರ್ವ, ಧರ್ಮಶ್ರೀ, ಸಾರ್ಥ, ಯಾನ ಮುಂತಾದ ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡು ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ ಎಂದರು.ಸಭಾಧ್ಯಕ್ಷರಾಗಿ ಮಾತನಾಡಿದ ಕೆ.ಪಿ. ಶೆಣೈ, ಭೈರಪ್ಪ ಅವರ ಪ್ರತೀ ಕಾದಂಬರಿಯ ಹಿಂದೆ ವರ್ಷಗಳ ಅಧ್ಯಯನ, ಸಂಶೋಧನೆ ಮತ್ತು ಪ್ರವಾಸ ಅಡಕವಾಗಿದೆ. ಅವರ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಅದೇ ರೀತಿಯ ಮನೋಭೂಮಿಕೆ ಬೇಕು ಎಂದರು.
ಎಸ್. ನಿತ್ಯಾನಂದ ಪೈ ಸ್ವಾಗತಿಸಿ, ಭೈರಪ್ಪ ಅವರು ಮೂವರು ಬಾರಿ ಕಾರ್ಕಳ ಸಾಹಿತ್ಯ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸ್ಮರಣೆಯನ್ನು ಹಂಚಿಕೊಂಡರು. ಪ್ರೊ. ಬಿ. ಪದ್ಮನಾಭ ಗೌಡ ಧನ್ಯವಾದ ಅರ್ಪಿಸಿದರು. ತುಕಾರಾಂ ನಾಯಕ್ ಅತಿಥಿಗಳಿಗೆ ಗೌರವ ಸಲ್ಲಿಸಿದರು.ಸಭೆಯಲ್ಲಿ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಮತ್ತು ಪ್ರಭಾಚಂದ್ರ ಜೈನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕು. ಶ್ರಾವ್ಯ ಪ್ರಾರ್ಥನೆ ಮಾಡಿದರು; ಡಾ. ಸುಮತಿ ಪಿ ಕಾರ್ಯಕ್ರಮ ನಿರ್ವಹಿಸಿದರು.