ಕಾರ್ಕಳ: ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಕಳ ಕಾರ್ಮಿಕ ಇಲಾಖೆಯು ಕೊಡಮಾಡಿದ ಸ್ಮಾರ್ಟ್ ಕಾರ್ಡ್‌ಗಳನ್ನು ಶನಿವಾರ ಕಾರ್ಕಳದ ಸಿಐಟಿಯು ಕಚೇರಿಯಲ್ಲಿ ಬೀಡಿ ಕಾರ್ಮಿಕರಿಗೆ ವಿತರಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ರಾಜ್ಯಾದ್ಯಂತ ಅಸಂಘಟಿತ ವಲಯದಲ್ಲಿ ದುಡಿಯುವ ಬೀಡಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಕಾರ್ಕಳದಲ್ಲಿ ಸಾವಿರಾರು ಬೀಡಿ ಕಾರ್ಮಿಕರು ಇದ್ದಾರೆ. ಶನಿವಾರ ಮೊದಲ ಹಂತದ ಕಾರ್ಡನ್ನು ಕಾರ್ಮಿಕರಿಗೆ ನೀಡಲಾಯಿತು.ಸದ್ಯ ಈ ಸ್ಮಾರ್ಟ್ ಕಾರ್ಡ್ ಯೋಜನೆಯಲ್ಲಿ ಅಪಘಾತ ಪರಿಹಾರ ಸೌಲಭ್ಯಗಳು, ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚಗಳು ದೊರಕಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್, ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ಈ ಯೋಜನೆಯ ಮೂಲಕ ನೀಡಬೇಕು. ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕಡಿಮೆ ವೇತನದಲ್ಲಿ ದುಡಿಯುತ್ತಿದ್ದು ಅವರಿಗೆ ಈ ಕಾರ್ಡ್ ತುಂಬಾ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿ ಮಾಡಲು ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಹೋರಾಟದ ಅಗತ್ಯವು ಇದೆ ಎಂದು ಹೇಳಿದರು.
ಕಾರ್ಕಳ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ ಮತ್ತು ಸಿಐಟಿಯು ಮುಖಂಡರಾದ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.