ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳು ಬಯಲು ಮುಕ್ತ ಸೂಚ್ಯಾಂಕದಲ್ಲಿ ರಾಜ್ಯದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ. ಇದರಿಂದಾಗಿ ಸ್ವಚ್ಛತೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕುಟುಂಬಗಳು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಸ್ವಚ್ಛ ಕಾರ್ಕಳ - ಸ್ವರ್ಣ ಕಾರ್ಕಳ ಪರಿಕಲ್ಪನೆಗೆ ರಾಜ್ಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದಂತಾಗಿದೆ.ಮಾನದಂಡಗಳೇನು? : ಎಲ್ಲಾ ಮನೆಗಳಲ್ಲಿ ಶೌಚಾಲಯ ವಿದ್ದು, ಅಂಗನವಾಡಿ ಹಾಗು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯಗಳು ನಿರ್ಮಾಣ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಬೇಕು, ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸ್ಚಚ್ಛತೆಗೆ ಆದ್ಯತೆಗಳನ್ನು ಪರಿಗಣಿಸಿ ಈ ಸೂಚ್ಯಂಕ ನೀಡಲಾಗಿದೆ.
ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 38 ಗ್ರಾಮಗಳಿವೆ. ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 16 ಗ್ರಾಮಗಳಿವೆ. ಅದರಲ್ಲೂ ಎರಡೂ ತಾಲೂಕುಗಳಲ್ಲಿ ಬೃಹತ್ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ.ಹೆಬ್ರಿ ತಾಲೂಕಿನ ಆಗುಂಬೆ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಎಂ ಆರ್ ಎಫ್ ಘಟಕಗಳಲ್ಲಿ ಹೆಬ್ರಿ ತಾಲೂಕಿನ 16 ಗ್ರಾಮಗಳ ಪೈಕಿ ಹದಿನೈದು ಗ್ರಾಮ ಪಂಚಾಯಿತಿಗಳು ಬ್ರಹ್ಮಾವರ ತಾಲೂಕಿನ ಕಳ್ತೂರು, ಚೆರ್ಕಾಡಿ ಸಂತೆಕಟ್ಟೆ, ಕುಂದಾಪುರ ತಾಲೂಕಿನ ಹೆಂಗವಳ್ಳಿ ಪಂಚಾಯಿತಿಗಳ ಘನತ್ಯಾಜ್ಯ ಗಳು ನೇರವಾಗಿ ಹೆಬ್ರಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೇರಿಸಿ ಬಳಿಕ ಪರಿಷ್ಕರಿಸಿ ವಿಲೇವಾರಿ ಮಾಡಲಾಗುತ್ತದೆ. ಅದರಲ್ಲೂ ಕಾರ್ಕಳ ತಾಲೂಕಿನ 28 ಗ್ರಾಮ ಪಂಚಾಯಿತಿ ಗಳು ಹೆಬ್ರಿಯ ವರಂಗ ಗ್ರಾಮ, ಕಾಪು ತಾಲೂಕಿನ ಎರಡೂ ಗ್ರಾಮಗಳು ಹಾಗೂ ಉಡುಪಿ ತಾಲೂಕಿನ ಒಂದು ಗ್ರಾಮದ ಘನತ್ಯಾಜ್ಯ ಗಳು ಕಾರ್ಕಳ ನಿಟ್ಟೆಯಲ್ಲಿ ನಿರ್ಮಾಣ ಮಾಡಲಾದ ಬೃಹತ್ ಎಮ್ ಆರ್ ಎಫ್ ಘಟಕದಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಒಟ್ಟು ಕುಟುಂಬಗಳು :ಕಾರ್ಕಳ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು43869 ಕುಟುಂಬಗಳಿದ್ದು 43869 ಶೌಚಾಲಯಗಳಿವೆ , ಅದರಲ್ಲೂ ಹೆಬ್ರಿ ತಾಲೂಕಿನಲ್ಲಿ 59000 ಮನೆಗಳಿದ್ದು 59000 ಶೌಚಾಲಯಗಳಿವೆ. ಕಾರ್ಕಳದ ಘನತ್ಯಾಜ್ಯ ವಿಲೇವಾರಿಯಲ್ಲಿನ ಎಸ್ ಆರ್ ಎನ್ ಎಂ ಘಟಕಗಳು ಸೇರಿದಂತೆ ಒಟ್ಟು 200 ಜನ ಕರ್ತವ್ಯ ನಿರ್ವಹಿಸುತ್ತಿದ್ದು , ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಯಲ್ಲಿನ ಎಸ್ ಆರ್ ಎನ್ ಎಂ ಘಟಕಗಳು ಸೇರಿದಂತೆ ಒಟ್ಟು 90 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಕಳ ಹಾಗು ಹೆಬ್ರಿ ತಾಲೂಕುಗಳು ಬಯಲು ಮುಕ್ತ ಸೂಚ್ಯಂಕ ದಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನ ಪಡೆದಿರುವುದು ಖುಷಿ ಯ ವಿಚಾರವಾಗಿದೆ. ಎಲ್ಲಾ ಕುಟುಂಬಗಳ ಸಹಕಾರ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಹಕರಿಸಿದ್ದಾರೆ. ಇದು ಮುಂದೆಯು ಕಾರ್ಯಗತವಾಗುತ್ತಾ ಸಾಗಬೇಕು ಎಂದು ಕಾರ್ಕಳ ಹಾಗೂ ಹೆಬ್ರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜೆ. ಹೇಳಿದರು.ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಸ್ವಚ್ಛ ಕಾರ್ಕಳ - ಸ್ವರ್ಣ ಕಾರ್ಕಳ ವನ್ನು ರೂಪಿಸುವಲ್ಲಿ ಕ್ಷೇತ್ರದ ಜನರು ಸಹಕಾರ ನೀಡಿರುವುದು ಖುಷಿ ವಿಚಾರವಾಗಿದೆ. ಸ್ವಚ್ಛತೆಗೆ ಪ್ರಾಧಾನ್ಯತೆಯನ್ನು ನೀಡುವಲ್ಲಿ ಅವರ ಸಹಕಾರ ಹಿರಿದು ಎಂದು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ತಿಳಿಸಿದರು.