ಸಾರಾಂಶ
ಹೊನ್ನಾವರ: ತಾಲೂಕಿನ ಕರ್ಕಿ ಅರಬ್ಬಿ ಸಮುದ್ರದ ತಟದಲ್ಲಿರುವ ತೊಪ್ಪಲಕೇರಿ, ಹೆಗಡೆಹಿತ್ಲ ದಂಡೆಗೆ ಹಾಕಿರುವ ತಡೆಗೋಡೆ ಸಂಪೂರ್ಣ ನಾಶಗೊಂಡಿದ್ದು, ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ದೊರಕಿಸುವಂತೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿ, ನಮ್ಮ ಪೂರ್ವಿಕರ ಕಾಲದಿಂದಲೂ ತೊಪ್ಪಲಕೇರಿ, ಹೆಗಡೆಹಿತ್ತಲು, ಪಾವಿನಕುರ್ವಾ ಮಜರೆಯ ಪಶ್ಚಿಮ ದಿಕ್ಕಿನಲ್ಲಿರುವ ಶರಾವತಿ ನದಿ ಹಾಗೂ ಅರಬ್ಬಿ ಸಮುದ್ರದ ಅಲೆಯ(ಸಂಗಮ) ಅಂಚಿನಲ್ಲಿ ವಾಸಿಸುತ್ತಾ ಬಂದಿದ್ದೇವೆ. ಈ ಭಾಗದಲ್ಲಿ ಹಲವಾರು ಮನೆ, ಭೂಮಿ, ಜನವಸತಿ ಇರುತ್ತಿದ್ದು, ಕಳೆದ 2017ನೇ ಜೂನ್‌ನಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಕಡಲ ಕೊರೆತ ಉಂಟಾಗಿ ಹಿಂದೆ ನಿರ್ಮಿಸಿದ ತಡೆಗೋಡೆಗಳು ಸಂಪೂರ್ಣ ನೆಲಸಮವಾಗಿದೆ. ಕಡಲ ಕೊರೆತವನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಕರ್ಕಿ ಗ್ರಾಮ ಪಂಚಾಯಿತಿ ಸದಸ್ಯ ಹರಿಶ್ಚಂದ್ರ ನಾಯ್ಕ, ಸ್ಥಳೀಯರಾದ ಸಣ್ತಮ್ಮ ನಾಯ್ಕ ಮಾತನಾಡಿ, ಕರ್ಕಿ ಗ್ರಾಪಂ ವ್ಯಾಪ್ತಿಯಲ್ಲಿ ಶರಾವತಿ- ಬಡಗಣಿ ನದಿಯ ಸಂಗಮ ಪ್ರದೇಶದಲ್ಲಿ ತಡೆಗೋಡೆ ಕುಸಿದು ಹಾನಿಯಾಗುವ ಕುರಿತು ಎಲ್ಲ ಸರ್ಕಾರದ ಅವಧಿಯಲ್ಲಿಯು ಮನವಿಯನ್ನು ನೀಡುತ್ತಾ ಬಂದಿದ್ದೇವೆ. ಈ ಬಗ್ಗೆ ಅನೇಕ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದರು.ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಾಕರ ಮುಕ್ರಿ, ಸುಮತಿ ನಾಯ್ಕ ಸ್ಥಳೀಯರಾದ ಸುನೀಲ ವರ್ಗೀಸ್, ಮೋಹನ ನಾಯ್ಕ, ಗಜಾನನ ನಾಯ್ಕ, ಶಂಕರ ನಾಯ್ಕ, ಮಾದೇವ ನಾಯ್ಕ, ನಾಗಪ್ಪ ನಾಯ್ಕ ಇತರರು ಇದ್ದರು.