ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಚಿಂತನೆಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯಲಾಗುತ್ತಿದೆ. ಆದರೆ ಮಕ್ಕಳಿಲ್ಲದ ಕಾರಣದಿಂದ ತಾಲೂಕಿನ ಕರ್ಲಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬಂದ್ ಮಾಡಲಾಗಿದೆ.

ವಿಶೇಷ ವರದಿಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಚಿಂತನೆಯಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯಲಾಗುತ್ತಿದೆ. ಆದರೆ ಮಕ್ಕಳಿಲ್ಲದ ಕಾರಣದಿಂದ ತಾಲೂಕಿನ ಕರ್ಲಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬಂದ್ ಮಾಡಲಾಗಿದೆ. ಸುಮಾರು ಏಳು ದಶಕಗಳಿಂದ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಶಾಲೆಯನ್ನು ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಮುಚ್ಚಲಾಗಿದೆ. ಸರ್ಕಾರಿ ಶಾಲೆಯ ಈ ಸ್ಥಿತಿಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲಣತಾಣದಲ್ಲಿಯೂ ಶಾಲೆ ಬಂದ್‌ ಆಗಿರುವ ಕುರಿತು ವೈರಲ್‌ ಆಗಿದ್ದು, ಪ್ರಜ್ಞಾವಂತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಗ್ರಾಮದ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿತ್ತು. ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ದಾಖಲಾತಿ ಕೊರತೆಯಾಗಿದ್ದರಿಂದ, ಒಬ್ಬ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಲಾಗಿತ್ತು. ಹೀಗಾಗಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ಉಳಿದುಕೊಂಡಿದ್ದರು. ಇದೀಗ ಶಾಲೆ ಬಂದ್ ಆಗಿರುವುದರಿಂದ ಇದ್ದೊಬ್ಬ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ.ಶಾಲೆ ಬಂದ್ ಆಗಿರುವುದರಿಂದ, ಅದೇ ಕಟ್ಟಡವನ್ನು ಅಂಗನವಾಡಿಗೆ ಬಿಟ್ಟುಕೊಡಲಾಗಿದೆ. ಶಾಲೆ ಆರಂಭವಾದಾಗಿನ ದಿನದಂದು ಅಂದವಾಗಿದ್ದ ಗೋಡೆಗಳು, ಈಗ ಅಂದ ಕಳೆದುಕೊಂಡಿವೆ. ಶಾಲೆಯಲ್ಲಿ ಕಲಿತಿರುವ ಗ್ರಾಮದ ಹಳೇ ವಿದ್ಯಾರ್ಥಿಗಳು, ಶಾಲೆ ನೆನೆದು ಮರುಕಪಡುತ್ತಿದ್ದಾರೆ.ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶಾಲೆ ಉಳಿಸಲು ಎಲ್ಲ ಪ್ರಯತ್ನ ಮಾಡಿದರೂ ವಿದ್ಯಾರ್ಥಿಗಳ ಪ್ರವೇಶ ಆಗದಿದ್ದರಿಂದ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಬಂತು ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬುರಡಿಕಟ್ಟಿ ತಮ್ಮ ಅಳಲು ತೋಡಿಕೊಂಡರು. ಗ್ರಾಮದ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿದೆವು. ಆದರೆ, ಯಾರೊಬ್ಬರೂ ಸೇರಿಸಲಿಲ್ಲ. ಶಿಕ್ಷಣದ ವ್ಯವಸ್ಥೆ ಸರಿ ಇಲ್ಲವೆಂದು ಗ್ರಾಮಸ್ಥರು ಹೇಳಿದರು. ಈಗ ಗ್ರಾಮದಲ್ಲಿರುವ ಸುಮಾರು 40 ಮಕ್ಕಳು ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ. ಕೆಲವರು ಮಾಕನೂರಿನಲ್ಲಿರುವ ಶಾಲೆಗೆ ಹೋಗುತ್ತಿದ್ದಾರೆ. ಗ್ರಾಮದ ಎಲ್ಲ ಮಕ್ಕಳು ಎರಡು ವರ್ಷಗಳ ಹಿಂದೆಯೇ ಬೇರೆ ಶಾಲೆಗಳಿಗೆ ಹೋದರು. ಅಂದೇ ಶಾಲೆ ಮುಚ್ಚುವ ಬಗ್ಗೆ ಚರ್ಚೆ ನಡೆದಿತ್ತು. ಶಾಲೆ ಉಳಿಸಿಕೊಳ್ಳಲು ಮುಂದಾಗಿದ್ದ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಬುರಡೀಕಟ್ಟಿ ತಮ್ಮ ಮಗನನ್ನು ಅದೇ ಶಾಲೆಯಲ್ಲಿ ಉಳಿಸಿದ್ದರು. ಒಬ್ಬ ವಿದ್ಯಾರ್ಥಿ ಇರುವ ಕಾರಣಕ್ಕೆ ಶಾಲೆ ಉಳಿಯುತ್ತದೆ ಎಂದು ಭಾವಿಸಿದ್ದರು. ಎರಡು ವರ್ಷ ಒಬ್ಬ ಶಿಕ್ಷಕ ಹಾಗೂ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದರು. ಶಿಕ್ಷಕ ರಜೆ ಹಾಕಿದರೆ ಇಡೀ ಶಾಲೆ ಬಂದ್ ಆಗುತ್ತಿತ್ತು. ಜೊತೆಗೆ ಅಧ್ಯಕ್ಷರ ಮಗನಿಗೆ ಶಾಲೆಯಲ್ಲಿ ಸ್ನೇಹಿತರು ಇರಲಿಲ್ಲ. ಒಂಟಿಯಾಗಿಯೇ ಆಟ ಆಡಬೇಕಿತ್ತು. ಪಾಠ ಕೇಳಬೇಕಿತ್ತು. ಹೀಗಾಗಿ ಮಗನನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ. ಅಂದಿನಿಂದ ಶಾಲೆಗೆ ಯಾರೊಬ್ಬರೂ ಮಕ್ಕಳನ್ನು ಸೇರಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಶಾಲೆಯಲ್ಲಿ ಮಕ್ಕಳ ಕೊರತೆಯಾಗಿರುವ ಕಾರಣದಿಂದ ಕರ್ಲಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬಂದ್ ಮಾಡಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಎರಡು ವರ್ಷಗಳ ಕಾಲ ಮಕ್ಕಳ ದಾಖಲಾತಿಗಾಗಿ ಕಾಯಲಾಗುತ್ತದೆ. ಆದರೆ ಎರಡು ವರ್ಷಗಳ ಕಾಲ ಒಂದೇ ಮಗುವಿಟ್ಟುಕೊಂಡು ಕಾಯ್ದರೂ ಬೇರೆ ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸದ ಕಾರಣ ಶಾಲೆ ಬಂದ್ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.