ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ವಿವಿಧ ಕನ್ನಡ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಕೇವಲ ಪ್ರತಿಭಟನೆಗೆ ಸೀಮಿತವಾಗಿತ್ತು.ಸರ್ಕಾರಿ ಕಚೇರಿಗಳು, ಶಾಲೆಗಳು, ಬ್ಯಾಂಕ್‌ಗಳು, ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರಿಗೆ ಬಸ್‌ಗಳ ಸಂಚಾರ ಎಂದಿನಂತಿತ್ತು. ಅಂಗಡಿ ಬಾಗಿಲು ತೆರೆದಿದ್ದ ಮಾಲೀಕರಿಗೆ ಪ್ರತಿಭಟನಾಕಾರರು ಅಲ್ಲಲ್ಲಿ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಕರ್ನಾಟಕ ಬಂದ್‌ಗೆ ಸಹಕರಿಸವಂತೆ ಮನವಿ ಮಾಡುತ್ತಿದ್ದುದು ಕಂಡು ಬಂತು. ಬಂದ್ ಕರೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಬೆಂಗಳೂರಿನ ಸಂಜಯನಗರದಲ್ಲಿರುವ ವಾಟಾಳ್ ನಾಗರಾಜ್ ಅವರ ನಿವಾಸದ ಎದುರು ಪೊಲೀಸರು ಜಮಾಯಿಸಿದ್ದರು. ವಾಟಾಳ್ ಅವರು ತಮ್ಮ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ಮನೆಯಿಂದ ಹೊರಗೆ ಬರುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದು, ಪೊಲೀಸ್ ಜೀಪಿನಲ್ಲಿ ಕರೆದೊಯ್ದರು. ಇದೇ ವೇಳೆ, ಕನ್ನಡಪರ ಹೋರಾಟಗಾರ ರವಿ ಶೆಟ್ಟಿ ಬೈಂದೂರು, ಒಕ್ಕೂಟದ ಕಾರ್ಯದರ್ಶಿ ಗಿರೀಶ್ ಗೌಡ ಹಾಗೂ ಇತರರನ್ನು ಕೂಡ ವಶಕ್ಕೆ ಪಡೆದರು. ಹೀಗಾಗಿ, ವಾಟಾಳ್ ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆ ನಡೆಯಲೇ ಇಲ್ಲ.
ಈ ಮಧ್ಯೆ, ಸಾ.ರಾ.ಗೋವಿಂದು ನೇತೃತ್ವದಲ್ಲಿ ಕೆಲ ಕನ್ನಡಪರ ಹೋರಾಟಗಾರರು ಸದಾಶಿವನಗರದಲ್ಲಿರುವ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ತಮಿಳುನಾಡಿಗೆ ನೀರು ಬಿಡದಂತೆ ಮನವಿ ಮಾಡಿದರು.ಮಧ್ಯಾಹ್ನದವರೆಗೆ ಮಂಡ್ಯ ಬಂದ್:ಮಂಡ್ಯದಲ್ಲಿ ಬಂದ್‌ಗೆ ಸ್ವಲ್ಪಮಟ್ಟಿನ ಸ್ಪಂದನೆ ಕಂಡು ಬಂತು. ನಗರದ ಬಹುತೇಕ ಪ್ರಮುಖ ರಸ್ತೆಗಳ ಅಂಗಡಿಗಳನ್ನು ಮಾಲೀಕರು, ವರ್ತಕರು ಮಧ್ಯಾಹ್ನ 2 ಗಂಟೆವರೆಗೆ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಕನ್ನಡ ಸಂಘಟನೆಗಳ ಮುಖಂಡರು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಧರಣಿ ಕುಳಿತು, ಖಾಲಿ ಮಡಿಕೆ ಹೊತ್ತು, ಹುರುಳಿ ಕಾಳನ್ನು ತೋರಿಸಿ, ಬಾಯಿ ಬಡಿದುಕೊಂಡು, ಸಾರ್ವಜನಿಕರಿಗೆ ಲಾಲಿಪಪ್ ನೀಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಇದೇ ವೇಳೆ, ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಶ್ರೀರಂಗಪಟ್ಟಣದ ಸ್ನಾನಘಟ್ಟದ ಕಾವೇರಿ ನದಿ ದಡದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು, ಕಾವೇರಿ ಪ್ರಾಧಿಕಾರದ ಪಿಂಡ ಪ್ರದಾನ ಮಾಡಿ ವ್ಯಂಗ್ಯ ಪ್ರತಿಭಟನೆ ನಡೆಸಿದರು.ಮೈಸೂರಿನಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು, ಅಗ್ರಹಾರ ವೃತ್ತದಲ್ಲಿ ಮೈಸೂರು ಕನ್ನಡ ವೇದಿಕೆಯವರು, ಕಾಡಾ ಮುಂಭಾಗದಲ್ಲಿ ಕನ್ನಡ ಸೇನೆಯವರು, ಪುರಭವನದ ಮುಂಭಾಗದಲ್ಲಿ ಕಾವೇರಿ ಕ್ರಿಯಾ ಸಮಿತಿಯವರು ಪ್ರತಿಭಟನೆ ನಡೆಸಿದರು. ದಾವಣಗೆರೆಯಲ್ಲಿ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ಸಂಘಟನೆಯ ಮುಖಂಡರು ತಲೆ ಮೇಲೆ ಖಾಲಿ ಕೊಡ, ಬಕೆಟ್ ಹೊತ್ತು ಪ್ರತಿಭಟನೆ ನಡೆಸಿದರು. ಚಾಮರಾಜನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾ ಪಡೆಯವರು ಕಡ್ಲೆಪುರಿ, ಹೂವು, ಅರಿಶಿನ, ಕುಂಕುಮ ಎರಚಿ ಅಕ್ರೋಶ ವ್ಯಕ್ತಪಡಿಸಿದರು. ಯಳಂದೂರು ಹಾಗೂ ಮಡಿಕೇರಿಗಳಲ್ಲಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆಯಲ್ಲಿ ಕರ್ನಾಟಕ ಕಾವಲು ಪಡೆಯ ಕಾರ್ಯಕರ್ತರು ಸರ್ಕಾರಿ ಬಸ್ ನಿಲ್ದಾಣದ ಮುಂದಿನ ಹೆದ್ದಾರಿ ಬದಿ ಕೈ ಕಟ್ಟಿ, ಬಾಯಿ ಮುಚ್ಚಿ ಮಲಗುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ, ಶಿವಮೊಗ್ಗ, ಹಾಸನ, ಹುಬ್ಬಳ್ಳಿ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.ಕೋಟ್:
ತಮಿಳುನಾಡಲ್ಲಿ ಬಂದ್ ಮಾಡಿದರೆ ಅಲ್ಲಿನ ಜನ ಬೆಂಬಲ ಕೊಡುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಬಂದ್ ಮಾಡಿದರೆ ಗಂಟು ಕಳೆದುಕೊಳ್ಳೋ ಹಾಗೆ ಮಾಡುತ್ತಾರೆ. ಕರ್ನಾಟಕ ಬಂದ್ ಇಡೀ ರಾಜ್ಯಾದ್ಯಂತ ಚೆನ್ನಾಗಿ ಶಬ್ದ ಮಾಡಿದೆ. ಬಂದ್ ಕರೆದವರು ನಾವು, ನನ್ನನ್ನು ಸ್ಟೇಷನ್‌ನಲ್ಲಿ ಕುಳ್ಳಿಸಿದ್ರು. ಆದರೆ, ಕೆಲವರು ಬಂದ್ ಹಿಂಪಡೆದಿದ್ದೇವೆ ಅಂತ ಸಿಎಂ ಹತ್ರ ಹೇಳಿದ್ದಾರೆ. ಬಂದ್ ಹಿಂಪಡೆದಿಲ್ಲ. ನೀರು ಬಿಟ್ಟರೆ ಮತ್ತೆ ಕರ್ನಾಟಕ ಬಂದ್ ಮಾಡುತ್ತೇವೆ. ಮುಂದಿನ ಕರ್ನಾಟಕ ಬಂದ್‌ಗೆ ಎಲ್ಲರೂ ಬೆಂಬಲ ಕೊಡಬೇಕು.- ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ.