ಕಲರ್‌ ಬಳಸುವ ಗೋಬಿ, ಕಾಟನ್‌ ಕ್ಯಾಂಡಿ ನಿಷೇಧ

| Published : Mar 12 2024, 02:03 AM IST

ಸಾರಾಂಶ

ಮಕ್ಕಳು ಹಾಗೂ ಯುವಜನರಿಗೆ ಪ್ರಿಯವಾದ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ ತಯಾರಿಕೆಗೆ ನಿಷೇಧಿತ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ ಹೇರಿದ್ದು, ಇದನ್ನು ಉಲ್ಲಂಘಿಸಿದವರಿಗೆ 7 ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರು. ವರೆಗೆ ದಂಡ ವಿಧಿಸುವುದಾಗಿ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಕ್ಕಳು ಹಾಗೂ ಯುವಜನರಿಗೆ ಪ್ರಿಯವಾದ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ ತಯಾರಿಕೆಗೆ ನಿಷೇಧಿತ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿಷೇಧ ಹೇರಿದ್ದು, ಇದನ್ನು ಉಲ್ಲಂಘಿಸಿದವರಿಗೆ 7 ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರು. ವರೆಗೆ ದಂಡ ವಿಧಿಸುವುದಾಗಿ ಆದೇಶಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರಲ್ಲದೆ, ಈ ಸಂಬಂಧ ತಮ್ಮ ಇಲಾಖೆಯಿಂದ ಹೊರಡಿಸಿದ ಅಧಿಕೃತ ಆದೇಶದ ಪ್ರತಿಯನ್ನೂ ಪ್ರಕಟಿಸಿದರು. ರಾಜ್ಯದಲ್ಲಿ ಇನ್ಮುಂದೆ ನಿಷೇಧಿತ ಕಲರ್ ಬಳಕೆ ಮಾಡಿಕೊಂಡು ತಯಾರಿಸುವ ಕಾಟನ್​ ಕ್ಯಾಂಡಿ ಹಾಗೂ ಕೃತಕ ಬಣ್ಣ ಬಳಸಿ ತಯಾರಿಸುವ ಗೋಬಿ ಮಂಚೂರಿಯನ್‌ ನಿಷೇಧ ಮಾಡುತ್ತಿದ್ದೇವೆ. ಈ ಬಗ್ಗೆ ಅಧಿಕೃತ ಆದೇಶವನ್ನೂ ಹೊರಡಿಸಲಾಗಿದೆ. ಇದರ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ವಹಿಸಲಾಗುವುದು. ನಮ್ಮ ಅಧಿಕಾರಿಗಳು ಯಾವಾಗ ಎಲ್ಲಿ ಬೇಕಾದರೂ ದಾಳಿ ಮಾಡಿ ಆಹಾರ ಪರಿಶೀಲನೆ ನಡೆಸುತ್ತಾರೆ. ನಿಯಮ ಮೀರಿ ಯಾವುದೇ ಆಹಾರ ತಯಾರಕರು, ಯಾವುದೇ ವ್ಯಾಪಾರಿಗಳು, ಹೋಟೆಲ್‌ ಇತರೆಡೆ ಕೃತಕ ಬಣ್ಣ ಬಳಸಿ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ ತಯಾರಿಸಿ ಮಾರಾಟ ಮಾಡಿದರೆ ಕಾನೂನು ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ 7 ವರ್ಷಗಳಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರು. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು. ದಿನೇ ದಿನೇ ಜನರು ಹೊರಗಿನ ಆಹಾರ ಸೇವಿಸುವುದು ಹೆಚ್ಚಾಗುತ್ತಿದೆ. ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್‌ ತರಹದ ಆಹಾರಗಳಿಗೆ ಕೃತಕ ಬಣ್ಣ ಬಳಸುವುದರಿಂದ ಕ್ಯಾನ್ಸರ್ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ಹೇಳುತ್ತಿವೆ. ಮಾಲಿನ್ಯಕಾರಕ ಕೆಮಿಕಲ್ಸ್ ಉಪಯೋಗ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದಲೇ ಈ ಬಗ್ಗೆ ಎಲ್ಲಾ ಕಡೆ ಸರ್ವೆ ಮಾಡಿಸಿ ಪಡೆದ ಪರೀಕ್ಷಾ ವರದಿಗಳ ಆಧಾರದ ಮೇಲೆ ಈ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದೆ ಎಂದರು. ಸಮೀಕ್ಷೆಯಲ್ಲಿ ಗೋಬಿ ಮಂಚೂರಿಯನ್‌ನ 171 ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 107ರಲ್ಲಿ ರೋಡೋಮೈನ್‌ ಬಿ ಹಾಗೂ ಟಾರ್‌ ಟ್ರಾಸೈನ್ಸ್‌ನಂತಹ ಅಸುರಕ್ಷಿತ ಕೃತಕ ಬಣ್ಣಗಳನ್ನು ಬಳಸಿರುವುದು ಕಂಡುಬಂದಿದೆ. ರೋಡೋಮೈನ್ ಕ್ಯಾನ್ಸರ್‌ಕಾರಕ. ಇದರ ಬಳಕೆ ಸಂಪೂರ್ಣವಾಗಿ ಕಾನೂನು ಬಾಹಿರ. ಆದರೂ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಅದೇ ರೀತಿ ಕಾಟನ್ ಕ್ಯಾಂಡಿಯಲ್ಲಿ 25 ಮಾದರಿ ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ 15 ಮಾದರಿಗಳಲ್ಲಿ ಟಾರ್ ಟ್ರಾಸೈನ್, ಸನ್ ಸೆಟ್ ಯೆಲ್ಲೋ, ರೋಡಮೈನ್ ಬಿನಂತಹ ಕೃತಕ ಬಣ್ಣದ ಅಂಶಗಳು ಕಂಡುಬಂದಿವೆ.

ಈ ಹಿನ್ನೆಲೆಯಲ್ಲಿ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಲಾಗಿದೆ ಎಂದು ತಿಳಿಸಿದ ಸಚಿವರು, ಕೃತಕ ಬಣ್ಣ ಬಳಸದೆ ವೈಟ್‌ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.