17ಕ್ಕೆ ಜಿಲ್ಲೆಗೆ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ

| Published : Jan 13 2024, 01:35 AM IST

17ಕ್ಕೆ ಜಿಲ್ಲೆಗೆ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜ್ಯೋತಿ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಜಿಲ್ಲೆಗೆ ಜ.17ಕ್ಕೆ ಬರುತ್ತಿದೆ.

ಬೀದರ್‌: ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜ್ಯೋತಿ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಜಿಲ್ಲೆಗೆ ಜ.17ಕ್ಕೆ ಬರುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜ್ಯೋತಿ ರಥಯಾತ್ರೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಕರೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಬೀದರ್‌ ಜಿಲ್ಲೆಗೆ ಜ.17ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

ಚಾಂಗಲೇರ ಮೂಲಕ ಜ.17ರಂದು ಆಗಮಿಸಲಿರುವ ರಥಯಾತ್ರೆಯು ಮೆರವಣಿಗೆ ಮೂಲಕ ಬರಮಾಡಿಕೊಂಡು ಚಿಟಗುಪ್ಪ ತಾಲೂಕಿನಲ್ಲಿ ಮೆರವಣಿಗೆ ನಡೆಯಲಿದೆ.18ರಂದು ಹುಮನಾಬಾದ್‌, 19ರಂದು ಬೀದರ್‌, 20ರಂದು ಔರಾದ್‌, 22ರಂದು ಕಮಲನಗರ, 23ರಂದು ಭಾಲ್ಕಿ, 24ರಂದು ಹುಲಸೂರ ಮತ್ತು 25ರಿಂದ 27ರವರೆಗೆ ಬಸವಕಲ್ಯಾಣ ತಾಲೂಕಿನಲ್ಲಿ ರಥಯಾತ್ರೆ ಸಂಚರಿಸಲಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿವಿಧ ಶಾಲೆ ಕಾಲೇಜುಗಳ ಮಕ್ಕಳು ಕನ್ನಡ ಪರ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಯಾ ತಾಲೂಕುಗಳಲ್ಲಿ ತಹಸೀಲ್ದಾರರು ಪೂರ್ವಭಾವಿ ಸಭೆ ನಡೆಸಿ ಭಾಗವಹಿಸುವಂತೆ ನೋಡಿಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.

ಜ.19ರಂದು ಬೀದರ್‌ಗೆ ಜ್ಯೋತಿ ರಥಯಾತ್ರೆ ಆಗಮಿಸಿದಾಗ ಅಂದು ಸಂಜೆ 4 ಗಂಟೆಗೆ ನಗರದ ಮೈಲೂರು ಕ್ರಾಸ್‌ನಿಂದ ಮೆರವಣಿಗೆ ಆರಂಭವಾಗಿ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಲಿದ್ದು, ಇದರಲ್ಲಿ 1 ಕಿ.ಮೀ ಉದ್ದದ ಕನ್ನಡ ಧ್ವಜದ ಮೆರವಣಿಗೆ ಇರುತ್ತದೆ. ವಿವಿಧ ಶಾಲಾ ಕಾಲೇಜಿನ ಮಕ್ಕಳು ಕನ್ನಡ ಪರ ಸಂಘಟನೆ ಸೇರಿದಂತೆ ಇತರೆ ಹಲವಾರು ಜನರು ಭಾಗವಹಿಸಲಿದ್ದಾರೆ ಎಂದರು. ಪಂಜಿನ ಕವಾಯತು: ಜ.19ರಂದು ಬೀದರ್‌ಗೆ ಜ್ಯೋತಿ ರಥಯಾತ್ರೆ ಆಗಮಿಸಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6ಕ್ಕೆ ಪೊಲೀಸ್‌ ಇಲಾಖೆಯಿಂದ ಆಕರ್ಷಕ ಪಂಜಿನ ಕವಾಯತ್ತು ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಹೇಳಿದರು. ಜ. 19ರ ಸಂಜೆ 6 ಗಂಟೆಗೆ 30 ನಿಮಿಷಗಳ ಕಾಲ ಕರ್ನಾಟಕ ಸಂಭ್ರಮ ಸಮವಸ್ತ್ರದಾರಿಗಳಿಂದ ಪಂಜಿನ ಕವಾಯತು ನಡೆಯಲಿದೆ. ಕೆಎಸ್‌ಆರ್‌ಪಿ ಹೋಮಗಾರ್ಡ, ಅರಣ್ಯ ಇಲಾಖೆ, ಡಿಎಆರ್‌ ಮತ್ತು ಸಿವಿಲ್‌ ಪೊಲೀಸರಿಂದ ಪಂಜಿನ ಕವಾಯತ್ತು ಆಕರ್ಷಕವಾಗಿ ನಡೆಯಲಿದ್ದು, ಹೆಚ್ಚಿನ ಜನರು ಇದನ್ನು ವೀಕ್ಷಿಸಬೇಕೆಂದು ಕರೆ ನೀಡಿದರು.