ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನವನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಡ್ಡಾಪುರದ ಶ್ರೀ ದಾನಮ್ಮದೇವಿ ದೇವಸ್ಥಾನದ ಸುಕ್ಷೇತ್ರದಲ್ಲಿ ಸೆ. 30 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುಡ್ಡಾಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು, ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಶಿಷ್ಟಾಚಾರದಂತೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಿರ್ದೇಶನ ನೀಡಿದರು. ಕರ್ನಾಟಕ ಸುವರ್ಣ ಸಂಭ್ರಮದ ಈ ಕಾರ್ಯಕ್ರಮದಲ್ಲಿ ರಾಜ್ಯದ ಗಣ್ಯಾತಿಗಣ್ಯರೂ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ವಸತಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ, ಮೆರವಣಿಗೆ, ವೇದಿಕೆ ನಿರ್ವಹಣೆ ಮತ್ತು ನಿರ್ಮಾಣ, ಸಾಂಸ್ಕೃತಿಕ ಕಾರ್ಯಕ್ರಮ, ಸಾರಿಗೆ, ವಸತಿ, ಪ್ರಚಾರ, ಆರೋಗ್ಯ, ಸ್ವಚ್ಛತೆ ವ್ಯವಸ್ಥೆ, ಭದ್ರತೆ ಹಾಗೂ ಊಟೋಪಚಾರ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ನೀಡಲಾಗಿದೆ. ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ತಿಳಿಸಿದರು.ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿರುವುದರಿಂದ, ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಯಾವುದೇ ಸಮಸ್ಯೆಯಾಗದಂತೆ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಭದ್ರತಾ ವ್ಯವಸ್ಥೆಗೆ ಎಲ್ಲ ಸಿದ್ಧತೆ ಕೈಗೊಂಡಿರುವ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಟ್ರಸ್ಟ್‌ನ ಅಧ್ಯಕ್ಷ ವಿಜುಗೌಡ ಪಾಟೀಲ, ಕಾರ್ಯದರ್ಶಿ ವಿಠ್ಠಲ್ ಪೂಜಾರ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಪಿಆರ್‌ಇಡಿ ಕಾರ್ಯನಿರ್ವಾಹಕ ಅಭಿಯಂತರ ನಬಿಲಾಲ್ ಗಬಸಾವಳಗಿ, ಗ್ರಾಮೀಣ ಕುಡಿಯವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ನಿರ್ಮಿತಿ ಕೇಂದ್ರದ ಅಧಿಕಾರಿ ಮಳಜಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಬಿ.ಚಿಕ್ಕಲಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಹಿರಿಯ ಚೇತನಗಳ ಹೆಸರಲ್ಲಿ ಪ್ರಶಸ್ತಿ ಪ್ರದಾನ
ಕರ್ನಾಟಕ ಗಡಿನಾಡ ಹಿರಿಯ ಚೇತನಗಳಾದ ಶ್ರೀ ಡಾ.ಚನ್ನಬಸವ ಪಟ್ಟದೇವರು, ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸುವ ದೃಷ್ಟಿಯಿಂದ ಈಗಾಗಲೇ ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಹಲವು ಸಮಿತಿಗಳನ್ನು ರಚಿಸಿ, ಅಧಿಕಾರಿಗಳನ್ನು ನೇಮಿಸಿ, ಜವಾಬ್ದಾರಿ ವಹಿಸಲಾಗಿದೆ. ಈಗಾಗಲೇ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ಸೂಚನೆ ನೀಡಿದ್ದು, ಯಾವುದೇ ಸಮಸ್ಯೆ ಬಾರದಂತೆ ಕಾರ್ಯ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.