ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ವಿಧಿವಶ

| Published : Feb 26 2024, 01:34 AM IST

ಸಾರಾಂಶ

ಸುರಪುರ ಶಾಸಕ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯ್ಕ್ (66) ಅವರು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸುರಪುರ ಶಾಸಕ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ (66) ಅವರು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಮಧ್ಯಾಹ್ನ 1.50ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ ಕಿಡ್ನಿ ಸ್ಟೋನ್‌ ಆಗಿದ್ದು, ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಬಳಿಕ ಬಹು ಅಂಗಾಂಗ ವೈಫಲ್ಯ ಉಂಟಾಗಿತ್ತು. ಕಳೆದ 20 ದಿನಗಳಿಂದ ಮೈಸೂರು ಹಾಗೂ ಬೆಂಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಎಚ್‌ಎಎಲ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶಾಸಕರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ವೆಂಕಟಪ್ಪ ನಾಯಕ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ.ಪಾಟೀಲ್‌, ಶರಣ್‌ ಪ್ರಕಾಶ್‌ ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ರಾಜ್ಯ ಸರ್ಕಾರ, ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಆದೇಶಿಸಿದೆ.ನನ್ನ ಜೀವನದ ದುಃಖದ ದಿನ

ಇಂದು ನನ್ನ ಜೀವನದ ದುಃಖದ ದಿನ. ಮೂರ್ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ಬಂದು ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿದ್ದೆ. ಅವರು ಕಾಗದದ ಮೇಲೆ ಬರೆದು ರಾಜ್ಯಸಭೆ ಮತದಾನದ ವೇಳೆಗೆ ಬರುತ್ತೇನೆ ಎಂದು ಹೇಳಿದ್ದರು. ಅವರು ವಾಪಸ್ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ವಿಧಿಲೀಲೆ ಅವರನ್ನು ನಮ್ಮಿಂದ ದೂರ ಮಾಡಿದೆ.

ಡಿ.ಕೆ.ಶಿವಕುಮಾರ್‌. ಉಪಮುಖ್ಯಮಂತ್ರಿ

ಸಂಭಾವಿತ ರಾಜಕಾರಣಿ

ರಾಜಾ ವೆಂಕಟಪ್ಪ ನಾಯಕ ನನಗೆ ಬಹುಕಾಲದ ಸ್ನೇಹಿತ. ಬಹಳ ಸಂಭಾವಿತ ರಾಜಕಾರಣಿ. ಇತ್ತೀಚೆಗಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದೆ. ಅಧ್ಯಕ್ಷರಾಗಿ ಕೆಲಸ ಮಾಡಲಿಲ್ಲ ಎಂಬ ಬೇಸರವಿದೆ. ಅವರ ನಿಧನ ನೋವುಂಟು ಮಾಡಿದೆ. ಇದು ವೈಯಕ್ತಿಕವಾಗಿ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

===ಅಗಲಿಕೆ ನೋವುಂಟು ಮಾಡಿದೆ

ರಾಜಾ ವೆಂಕಟಪ್ಪ ನಾಯಕ ಅವರು ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. ಕ್ಷೇತ್ರಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ.- ಯು.ಟಿ.ಖಾದರ್‌, ಸಭಾಧ್ಯಕ್ಷ, ವಿಧಾನಸಭೆ