ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗಾಗಿ ಪ್ರವೇಶಾತಿಯು ಮಾ. 3 ರಿಂದ ಆರಂಭಗೊಳ್ಳಲಿದ್ದು, ಪಾಲಕರು ತಮ್ಮ ಮಕ್ಕಳನ್ನು ಈ ಕನ್ನಡ ಶಾಲೆಗೆ ಸೇರಿಸಬೇಕೆಂದು ಶಾಲೆಯನ್ನು ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಕೋರಿದರು.ನಾಲ್ಕು ವರ್ಷಗಳ ಹಿಂದೆ ಕೇವಲ 40 ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇದೀಗ 506 ವಿದ್ಯಾರ್ಥಿಗಳನ್ನು ಹೊಂದಿದೆ. ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದರು. ಕರವೇ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ದಾನಿಗಳನ್ನು ಗುರುತಿಸಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಸಾಧಿಸಿತು. ಶಾಸಕ ಜಿ.ಡಿ. ಹರೀಶ್ ಗೌಡ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಕರಿಸಿದರು. ಮುಖ್ಯಶಿಕ್ಷಕ ಡಾ. ಮಾದುಪ್ರಸಾದ್ ಸೇರಿದಂತೆ ಶಿಕ್ಷಕವೃಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರ ಪರಿಣಾಮ ಇದೀಗ ಶಾಲೆ ತಾಲೂಕಿನಲ್ಲಿ ಮತ್ತೆ ತಲೆ ಎತ್ತಿ ನಿಂತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಶಾಲೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳನ್ನು ಓದಿ ತಿಳಿದ ಒಸಾಟ್ ಸಂಸ್ಥೆ ಇದೀಗ ಶಾಲೆಗೆ ಒಂದು ಕೋಟಿ ರು. ವೆಚ್ಚದಡಿ 6 ಸ್ಮಾರ್ಟ್ ಕ್ಲಾಸ್ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದು, ಪ್ರಸಕ್ತ ಸಾಲಿನಿಂದ ಕೊಠಡಿಗಳು ಸೇವೆಗೆ ಸಿಗಲಿದೆ. ಶಾಲೆಯಲ್ಲಿ ಎಲ್.ಕೆಜಿ ಮತ್ತು ಯುಕೆಜಿ ವಿಭಾಗವಿದ್ದು, ಪಾಲಕರು ನೀಡುವ ಶುಲ್ಕದಿಂದಲೇ ಈ ವಿಭಾಗ ನಿರ್ವಹಿಸುವಂತೆ ಕ್ರಮವಹಿಸಲಾಗಿದ್ದು, 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ ತಮ್ಮ ಶಾಸಕರ ನಿಧಿಯಿಂದ 5 ಲಕ್ಷ ರು. ಗಳನ್ನು ನೀಡಿ ಅಡುಗೆ ಕೊಠಡಿ ನಿರ್ಮಿಸಿಕೊಡುತ್ತಿದ್ದಾರೆ. ಒಸಾಟ್ ಸಂಸ್ಥೆ ಹೈಟೆಕ್ ಶೌಚಗೃಹ ನಿರ್ಮಿಸಿಕೊಟ್ಟಿದೆ. ಇದೀಗ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 300 ವಿದ್ಯಾರ್ಥಿಗಳು ಸೇರ್ಪಡೆಗೊಂಡಲ್ಲಿ ಮತ್ತೆ ಹೆಚ್ಚುವರಿಯಾಗಿ 6 ಸ್ಮಾರ್ಟ್ ಕ್ಲಾಸ್ ಕೊಠಡಿಗಳ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದು, ತಾಲೂಕಿನ ನಾಗರಿಕರು ಸರ್ಕಾರಿ ಶಾಲೆ ಉಳಿವಿಗೆ 150 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯ ವೈಭವನ್ನು ಮತ್ತೆ ತರಲು ಕೈಜೋಡಿಸಬೇಕೆಂದು ಕೋರಿದರು.ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಕರವೇ ಉಪಾಧ್ಯಕ್ಷ ಬಲರಾಮ್, ನಗರಾಧ್ಯಕ್ಷ ಮುನ್ನ, ಪೋಷಕರ ಸಮಿತಿ ಅಧ್ಯಕ್ಷ ಶಿವರಾಮ್ ಇದ್ದರು.